ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಲಾಗಿದೆ.

ರಾಗಿಣಿ ಆಪ್ತ ರವಿಶಂಕರ್ ಬಂಧನದ ಬೆನ್ನಲ್ಲೇ ಇಂದು ಮುಂಜಾನೆ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ದಾಳಿಯ ವೇಳೆಯಲ್ಲಿ ಮಹತ್ವದ ವಸ್ತುಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಬಂಧಿಸಿದ್ದರು.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಅಧಿಕಾರಿಗಳು ರಾಗಿಣಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರಾಗಿಣಿ ಆಪ್ತ ರವಿಶಂಕರ್ ನೀಡಿರುವ ಹೇಳಿಕೆ ಹಾಗೂ ರಾಗಿಣಿ ನೀಡಿರುವ ಹೇಳಿಕೆಗೂ ತಾಳೆಯಾಗುತ್ತಾ ಅನ್ನುವ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶಿಸಿದೆ.

ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ರಾಗಿಣಿ ಅವರ ಆರೋಗ್ಯ ತಪಾಸಣೆಯನ್ನು ನಡೆಸಲಿದ್ದಾರೆ. ನಂತರ ಸಿದ್ದಾಪುರದಲ್ಲಿನ ಸ್ಟೇ ಹೋಮ್ ಗೆ ಕರೆದೊಯ್ಯಲಿದ್ದಾರೆ. ರಾಗಿಣಿ ಇಂದು ರಾತ್ರಿ ಸ್ಟೇ ಹೋಮ್ ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಆರಂಭದಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ರಾಗಿಣಿ ಅವರನ್ನು ಇರಿಸಲು ನಿರ್ಧರಿಸಲಾಗಿತ್ತು. ಆದರೆ ಅಂತಿಮವಾಗಿ ಪೊಲೀಸರು ಸ್ಟೇ ಹೋಮ್ ಗೆ ಕರೆದೊಯ್ದಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ರಾಗಿಣಿ ವಿಚಾರಣೆಗೆ ಹಾಜರಾಗಲಿದ್ದಾರೆ.