ಬೆಂಗಳೂರು : ದೇಶವನ್ನೇ ತಲ್ಲಣಗೊಳಿಸಿರುವ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಒಂದೊಂದೆ ಮುಖವಾಡ ಕಳಚಿ ಬೀಳುತ್ತಿದೆ. ಕನ್ನಡದ ನಟ, ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಫೆಡ್ಲರ್ ಓರ್ವನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದು, ಹಲವರ ಬಣ್ಣ ಬಯಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ಡ್ರಗ್ಸ್ ಮಾಫಿಯಾ ತಳುಕು ಹಾಕಿದ್ರೆ, ಇನ್ನೊಂದೆಡೆ ಸ್ಯಾಂಡಲ್ ವುಡ್ ನಲ್ಲಿ ನಶೆಯ ವಾಸನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್ ಸಿಬಿ ಅಧಿಕಾರಿಗಳು ಜಾಡು ಹಿಡಿದಿದ್ದರು. ದೆಹಲಿ ಹಾಗೂ ಮುಂಬೈನಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ, ಬೆಂಗಳೂರಿಗೆ ಮಾರಿಜುನಾ ಸರಬರಾಜು ಮಾಡುತ್ತಿದ್ದ ಗೋವಾ ಮೂಲದ ಕಿಂಗ್ ಪಿನ್ ಎಫ್.ಅಹ್ಮದ್ ವಶಕ್ಕೆ ಪಡೆಯಲಾಗಿದೆ.

ಆಹ್ಮದ್ ಬೆಂಗಳೂರಿನ ಕೆಲ ಪ್ರಮುಖ ವ್ಯಕ್ತಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈತ ಖಾಸಗಿ ರೆಸಾರ್ಟ್ ನಲ್ಲಿ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಬೆಂಗಳೂರಿಗೆ ಪ್ರಮುಖ ಮೆರಿಜುವಾನ ಸರಬರಾಜುಗಾರನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಸ್ಯಾಂಡಲ್ ವುಡ್ ನ ಪೇಜ್ ತ್ರೀ ಸೆಲಬ್ರೆಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಫ್.ಆಹ್ಮದ್ ಸ್ಯಾಂಡಲ್ ವುಡ್ ನಟ, ನಟಿಯರ ಜೊತೆಗೂ ಸಂಪರ್ಕ ಹೊಂದಿದ್ದ. ಮೂರೂವರೆ ಕೆ.ಜಿ. ಗಾಂಜಾ ಬೆಂಗಳೂರಿನ ಸರಬರಾಜು ಆಗಿತ್ತಿತ್ತು ಅನ್ನುವ ಮಾಹಿತಿ ಬಯಲಾಗಿದೆ.
ವಿದೇಶಿ ಪೋಸ್ಟ್ ಆಫೀಸ್ ಗಳಲ್ಲಿದ್ದ 3.5 ಕೆ.ಜಿ. ಗಾಂಜಾವನ್ನು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 1 ಗ್ರಾಂ.ಗೆ ಗಾಂಜಾವನ್ನು ಬರೋಬ್ಬರಿ 5 ಸಾವಿರ ರೂ. ಮಾರಾಟ ಮಾಡಲಾಗುತ್ತಿತ್ತು.

ಡಾರ್ಕ್ ನೆಟ್ ಮೂಲಕ ಭಾರೀ ಗಾಂಜಾವನ್ನು ಖರೀದಿಸಲಾಗುತ್ತಿದ್ದು, ಕ್ರಿಪ್ಟೋ ಕರೆನ್ಸಿ ಮೂಲಕ ಖರೀದಿ ವ್ಯವಹಾರವನ್ನು ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೀಗ ಡ್ರಗ್ಸ್ ಫೆಡ್ಲರ್ ತನ್ನ ಜೊತೆಗೆ ನಂಟು ಹೊಂದಿರುವ ನಟ, ನಟಿಯರ ಹೆಸರನ್ನು ಅಹ್ಮದ್ ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎನ್ ಸಿ ಬಿ ಅಧಿಕಾರಿಗಳು ಸ್ಯಾಂಡಲ್ ವುಡ್ ನ ನಟ, ನಟಿಯರನ್ನು ವಶಕ್ಕೆ ಪಡೆಯುವುದು ಬಹುತೇಕ ಖಚಿತ.