ಮಂಗಳೂರು : ರಾಜ್ಯದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ರೆಡ್ ಝೋನ್ ನಲ್ಲಿರುವ ಮಂಗಳೂರಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ. ಆದ್ರೀಗ ಬಂದರಿನಲ್ಲಿ ಹೊರರಾಜ್ಯದ ಮೀನು ಮಾರಾಟಕ್ಕೆ ಆಹ್ವಾನ ನೀಡೋ ಮೂಲಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಸಚಿವರು ಹೊಸ ಎಡವಟ್ಟಿಗೆ ಎಡೆಮಾಡಿಕೊಟ್ಟಿದ್ದಾರೆ. ಮಂಗಳೂರಿನ ಬಂದರಿನಲ್ಲಿ ಸಾಮಾಜಿಕ ಅಂತರವಿಲ್ಲದೇ ಮೀನು ಖರೀದಿ ನಡೆಯುತ್ತಿದ್ದು, ಕೊರೊನಾ ಸೋಂಕು ವ್ಯಾಪಿಸೋ ಆತಂಕ ಹೆಚ್ಚಾಗಿದೆ.

ರಾಜ್ಯದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರವೇ ಅವಕಾಶವಿದೆ. ರಾಜ್ಯದ ಬಂದರುಗಳಲ್ಲಿ ಮೀನು ಮಾರಾಟಕ್ಕೆ ಅವಕಾಶವಿಲ್ಲ. ಆದರೆ ತಮಿಳುನಾಡು, ಮಹಾರಾಷ್ಟ್ರ, ಆಂದ್ರಪ್ರದೇಶ, ಗೋವಾ ರಾಜ್ಯಗಳಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಯುತ್ತಿದೆ. ಅಲ್ಲಿನ ಮೀನು ತುಂಬಿದ ನೂರಾರು ಲಾರಿಗಳು ನಿತ್ಯವೂ ಮಂಗಳೂರಿನ ಬಂದರಿಗೆ ಬರುತ್ತಿವೆ. ಮಂಗಳೂರಿನ ಬಂದರಿನಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಮೀನು ಮಾರಾಟ ನಡೆಯುತ್ತಿದೆ. ಆದರೆ ಮೀನು ಖರೀದಿ ಮಾಡೋದಕ್ಕೆ ನಿತ್ಯವೂ 2,000 ದಿಂದ 5,000 ಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ. ಬಹುತೇಕರು ಮುಖಕ್ಕೆ ಮಾಸ್ಕ್ ಬಳಸುತ್ತಿಲ್ಲ. ಜೊತೆಗೆ ಯಾರೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಜನರು ಮುಗಿಬಿದ್ದು ಮೀನು ಖರೀದಿ ಮಾಡುತ್ತಿರೋದ್ರಿಂದಾಗಿ ಬಂದರು ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಡೋ ಸಾಧ್ಯತೆಯಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಮಂಗಳೂರು ನಗರದಲ್ಲಿಯೂ ಕೊರೊನಾ ಕಾಣಿಸಿಕೊಂಡಿದೆ. ಹೀಗಾಗಿ ಮಂಗಳೂರಲ್ಲಿ ಆತಂಕ ಶುರುವಾಗಿದೆ.

ಜಿಲ್ಲಾಡಳಿತ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶವನ್ನು ಪಾಲನೆ ಮಾಡುತ್ತಿದ್ದರೂ ಕೂಡ, ಮೀನುಗಾರಿಕಾ ಬಂದರಿನಲ್ಲಿ ಮಾತ್ರ ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿದೆ. ನಿತ್ಯವೂ ಸಾವಿರಾರು ಮಂದಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮೀನು ಖರೀದಿ ಮಾಡುತ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಬಂದರುಗಳಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದ್ರೆ ಸಾಮಾಜಿಕ ಅಂತರ ಕಾಪಾಡಲು ಸಮಸ್ಯೆಯಾಗುತ್ತಿದೆ ಅನ್ನೋ ನಿಟ್ಟಿನಲ್ಲಿಯೇ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶವನ್ನು ನೀಡದೇ ಕೇವಲ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಹೊರ ರಾಜ್ಯಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಆಳಸಮುದ್ರ ಮೀನುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅದ್ರಲ್ಲೂ ಕೊರೊನಾ ರೆಡೆ ಝೋನ್ ವ್ಯಾಪ್ತಿಯಲ್ಲಿರುವ ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶಗಳಿಂದ ಲಾರಿಗಳು ಮಂಗಳೂರು, ಉಡುಪಿಗೆ ಆಗಮಿಸುತ್ತಿವೆ. ಮೀನು ತುಂಬಿ ತರುವ ನೂರಾರು ಚಾಲಕರಿಗೂ ಕೊರೊನಾ ಭೀತಿಯಿದೆ. ಮೊದಲೇ ಮಂಗಳೂರಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಅಗತ್ಯವಸ್ತುಗಳ ಹೆಸರಲ್ಲಿ ರಾಜ್ಯಕ್ಕೆ ಮೀನುಗಳನ್ನು ತುಂಬಿಸಿ ತರುತ್ತಿರುವ ಚಾಲಕರಿಂದಲೂ ಕೊರೊನಾ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮೀನುಗಾರಿಕಾ ಸಚಿವರಾಗಿರೋ ಕೋಟ ಶ್ರೀನಿವಾಸ ಪೂಜಾರಿ ಅವರೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು. ಜಿಲ್ಲೆಯಲ್ಲಿ 21 ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೀಗಿದ್ದರೂ ಕೂಡ ಸಚಿವರು ಹೊರ ರಾಜ್ಯದ ಮೀನುಗಳನ್ನು ಮಾರಾಟ ಮಾಡಲು ಬಂದರಲ್ಲಿ ಅವಕಾಶ ಕಲ್ಪಿಸಿರುವುದು ಎಷ್ಟು ಸರಿ ಅಂತಾ ಹಲವರು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮೀನು ಮಾರಾಟ ನಡೆಯುತ್ತಿದ್ದರೂ ಕೂಡ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸೋ ಸಾಧ್ಯತೆ ದಟ್ಟವಾಗುತ್ತಿದೆ. ಇನ್ನಾದ್ರೂ ಜಿಲ್ಲಾಡಳಿತ ಹೊರ ರಾಜ್ಯಗಳಿಂದ ಬರುವ ಮೀನು ತುಂಬಿದ ಲಾರಿಗಳಿಗೆ ನಿಷೇಧ ಹೇರಬೇಕಿದೆ.