ಕರಾವಳಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಆತಂಕ : ಮಂಗಳೂರಲ್ಲಿಂದು ತಾಯಿ ಮಗನಿಗೆ ಸೋಂಕು

0

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಮಂಗಳೂರು ನಗರದಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಂಗಳೂರು ನಗರದ ಶಕ್ತಿನಗರದ ನಿವಾಸಿಯಾಗಿರುವ 80 ವರ್ಷದ ತಾಯಿ ಹಾಗೂ 45 ವರ್ಷದ ಮಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಈ ಹಿಂದೆ ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದ ಮಹಿಳೆಯೋರ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ವೃದ್ದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಪಕ್ಕದ ಬೆಡ್ ನಲ್ಲಿ ಶಕ್ತಿನಗರದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಸೋಂಕು ಹರಡಿದೆ. ವೃದ್ದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗುತ್ತಲೇ ಇಡೀ ಆಸ್ಪತ್ರೆಯನ್ನೇ ಸೀಲ್ ಡೌನ್ ಮಾಡಲಾಗಿತ್ತು. ಆಸ್ಪತ್ರೆಯ ಸುಮಾರು 190 ಮಂದಿ ಸಹಿತ ಸುಮಾರು 200 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಸದ್ಯ ಎಲ್ಲರೂ ಕ್ವಾರಂಟೈನ್ ನಲ್ಲಿದ್ದು, ಎಲ್ಲರ ಮೇಲೂ ನಿಗಾ ಇರಿಸಲಾಗಿದೆ

ನಿನ್ನೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಕೆಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಇಂದು ರೋಗಿ ಹಾಗೂ ಆಕೆಯ ಮಗನಿಗೆ ಕೊರೊನಾ ಸೊಂಕು ವ್ಯಾಪಿಸಿದೆ. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಯಿ ಮಗ ವಾಸವಿದ್ದ ಮನೆಯ ಸುತ್ತಲೂ ಸೀಲ್ ಡೌನ್ ಮಾಡಲಾಗಿದೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆಯ ಸಂಪರ್ಕದಿಂದ 6 ಮಂದಿಗೆ ಸೋಂಕು ವ್ಯಾಪಿಸಿದೆ.

ಈ ಪೈಕಿ ವೃದ್ದ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದು, 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 12 ಮಂದಿ ಗುಣಮುಖರಾಗಿದ್ದರೆ, ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.