ಮಲ್ಪೆ : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬಾರೀ ಗಾಳಿಯ ಹೊಡೆತಕ್ಕೆ ಬೋಟ್ ಬಂಡೆಗೆ ಬಡಿದು ಈ ದುರಂತ ಸಂಭವಿಸಿದೆ. ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಮುಳುಗಡೆಯಾಗಿರುವ ಬೋಟ್ ನ್ನು ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಬೋಟು ಎಂದು ತಿಳಿದುಬಂದಿದೆ. ಮೇ 14ರಂದು ಮಲ್ಪೆ ಬಂದರಿನಿಂದ ಬೋಟ್ ಮೀನುಗಾರಿಕೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಮೇ 19ರಂದು ವಾಪಸು ಮಲ್ಪೆ ಬಂದರಿಗೆ ಬರುವಾಗ ತಡರಾತ್ರಿ ಈ ಘಟನೆ ನಡೆದಿದೆ. ಮಲ್ಪೆ ಬಂದರಿನಿಂದ ಸುಮಾರು 6 ಮಾರು ಆಳ ದೂರದಲ್ಲಿ ಬೋಟಿನ ಸ್ಟೇರಿಂಗ್ ತುಂಡಾಗಿ, ಗಾಳಿಯ ರಭಸಕ್ಕೆ ಬೋಟ್ ನಿಯಂತ್ರಿಸಲು ಸಾಧ್ಯವಾಗದೇ ಸಮೀಪದಲ್ಲಿದ್ದ ತೆಲ್‌ಕಲ್ ಬಂಡೆಗೆ ಬೋಟ್ ಬಡಿದಿದೆ. ಬೋಟ್ ಸಂಪೂರ್ಣ ಹಾನಿಯಾಗಿ ಮುಳುಗಡೆಯಾಗುತ್ತಿರುವುದನ್ನು ಅರಿತ ಪಂಡರೀತೀರ್ಥ ದೋಣಿಯವರು ಧಾವಿಸಿ ಬಂದು ಬೋಟಿನಲ್ಲಿದ್ದ 6ಮಂದಿ ಮೀನುಗಾರರನ್ನು ರಕ್ಷಿಸಿ ದಡ ಸೇರಿಸಿದ್ದಾರೆ. ಮುಳುಗಡೆಯಾಗುತ್ತಿದ್ದ ಬೋಟನ್ನು ಶ್ರೀಚರಣ ಬೋಟ್ ಎಂಬ ಬೋಟಿನ ಮೂಲಕ ರಕ್ಷಿಸಲು ಪ್ರಯತ್ನಿಸಿದರೂ ಸಹಕಾರಿಯಾಗಲಿಲ್ಲ.

ಬೋಟಿನಲ್ಲಿದ್ದ ಸುಮಾರು 5ಲಕ್ಷ ರೂ. ಮೌಲ್ಯದ ಮೀನು, ಬಲೆ, ಡಿಸೇಲ್ ಸಮುದ್ರಪಾಲಾಗಿದೆ. ಸುಮಾರು 80ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಕರಾವಳಿ ಕಾವಲು ಪಡೆಯ ಪೊಲೀಸರು ಕೇಸು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.