ಮಂಗಳೂರು : ಕೊರೊನಾ ಹಿನ್ನೆಲೆ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಿಂದ ಹೊರ ಬರದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದ್ರೆ ಒಬ್ಬಂಟಿಯಾಗಿದ್ದ ವಿದ್ಯಾರ್ಥಿ ತನ್ನ ಬೇಸರವನ್ನು ಕಳೆಯಲು ತನ್ನ ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿಕೊಂಡು ಬಂದಿದ್ದಾನೆ. ಕೊನೆಗೆ ಜನರ ಕೈಲಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾರೆ.

ಈ ಘಟನೆ ನಡೆದಿರೋ ಮಂಗಳೂರು ನಗರದ ಬಲ್ಮಠದ ಆರ್ಯಸಮಾಜ ರಸ್ತೆಯಲ್ಲಿ. ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಿದ್ಯಾರ್ಥಿಯೋರ್ವ ಬಾಡಿಗೆ ಪ್ಲ್ಯಾಟ್ ನಲ್ಲಿ ವಾಸವಾಗಿದ್ದ. ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಒಂಟಿತನ ಕಾಡುತ್ತಿತ್ತು.

ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದವರನ್ನು ಹೊರತು ಪಡಿಸಿ ಹೊರಗಿನವರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ವಿದ್ಯಾರ್ಥಿ ತನ್ನ ಗೆಳೆಯನನ್ನು ಪ್ಲ್ಯಾಟ್ ಗೆ ಕರೆದುಕೊಂಡು ಬರುತ್ತೇನೆ ಅಂತಾ ವಸತಿ ಸಮುಚ್ಚಯದ ಅಸೋಶಿಯೇಷನ್ ನವರ ಬಳಿ ಹೇಳಿಕೊಂಡಿದ್ದರೂ, ಅಸೋಸಿಯೇಷನ್ ಅವರು ಅನುಮತಿಯನ್ನು ನೀಡಿರಲಿಲ್ಲ.

ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿ ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಸೂಟ್ ಕೇಸ್ ನಲ್ಲಿ ಅಲುಗಾಡುತ್ತಿರೋದು ಕಂಡು ಬಂದಿದೆ. ಇದು ವಸತಿ ಸಮುಚ್ಚಯದಲ್ಲಿರುವ ಇತರರಿಗೆ ಅನುಮಾನ ಮೂಡಿಸಿದೆ. ಕೂಡಲೇ ಅಪಾರ್ಟ್ ಮೆಂಟ್ ನಿವಾಸಿಗಳು ಸೂಟ್ ಕೇಸ್ ತೆರೆಯುವಂತೆ ಒತ್ತಾಯಿಸಿದ್ದಾರೆ.

ಸಂದಿಗ್ಧ ಸ್ಥಿತಿಗೆ ಸಿಲುಕಿದ ಯುವಕ ಸೂಟ್ ಕೇಸ್ ತೆರೆಯುತ್ತಿದ್ದಂತೆಯೇ ಸತ್ಯಾಂಶ ಬಹಿರಂಗವಾಗಿದೆ. ಅಪಾರ್ಟ್ ಮೆಂಟ್ ಅಸೋಸಿಯೇಷನ್ ನವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಬಳಿಕ ಇಬ್ಬರನ್ನು ಕದ್ರಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.