ಚಿಕ್ಕಮಗಳೂರು : ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿಯ ಗುಣಸಾಗರ ಎಂಬಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಸಂಜೆಯ ವೇಳೆಯಲ್ಲಿ ತನ್ನ ಸ್ಯಾಂಟ್ರೋ ಕಾರಿನಲ್ಲಿ ಮನೆಯಿಂದ ಒಬ್ಬರೇ ತೆರಳಿದ್ದಾರೆ. ರಾತ್ರಿಯಾದರೂ ಅವರು ವಾಪಾಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗನ್ ಮ್ಯಾನ್ ಹಾಗೂ ಪೊಲೀಸರು ಧರ್ಮೇಗೌಡರಿಗಾಗಿ ಹುಡುಕಾಟವನ್ನು ನಡೆಸಿದ್ದಾರೆ. ಆದರೆ ಮಂಗಳವಾರ ಬೆಳಗಿನ ಜಾವ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗುಣಸಾಗರದ ಬಳಿಯಲ್ಲಿನ ರೈಲ್ವೆ ಹಳಿಯಲ್ಲಿ ಧರ್ಮೇಗೌಡ ಅವರ ಮೃತದೇಹ ಪತ್ತೆಯಾಗಿದೆ. ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ದೇಹ ಸಂಪೂರ್ಣವಾಗಿ ಛಿದ್ರವಾಗಿದ್ದು, ತಲೆ ಕಟ್ಟಾಗಿ ರೈಲ್ವೆ ಹಳಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಬಿದ್ದಿದೆ. ಆತ್ಮಹತ್ಯೆ ಮಾಡಿಕೊಂಡ ನಂತರ ಮೂರು ರೈಲು ಸಂಚರಿಸಿವೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಬಸವರಾಜ್ ಹೊರಟ್ಟಿ, ಶ್ರೀಕಂಠೇಗೌಡ, ಶಿವರಾಮೇ ಗೌಡ ಅವರು ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ.
ವಿಧಾನ ಪರಿಷತ್ ಅಧಿವೇಶನದ ವೇಳೆಯಲ್ಲಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಈ ಘಟನೆಯಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡ್ರಾ, ಇಲ್ಲಾ ವೈಯಕ್ತಿಕ ಕಾರಣಕ್ಕೆ ರೈಲಿಗೆ ತಲೆಕೊಟ್ರಾ. ಅಥವಾ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾಗಿದ್ದಾರಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.