ಯುಕೆ ವೈರಸ್ ಭೀತಿ : ಶಾಲಾರಂಭಕ್ಕೆ ಪೋಷಕರ ಹಿಂದೇಟು..!

ಬೆಂಗಳೂರು : ಒಂದೆಡೆ ಯು.ಕೆ. ವೈರಸ್ ಭೀತಿ ಕಾಡುತ್ತಿದ್ರೆ, ಇನ್ನೊಂದೆಡೆ ಕೊರೊನಾ ವೈರಸ್ ಸೋಂಕಿನ ಹಾವಳಿ. ಈ ನಡುವಲ್ಲೇ ರಾಜ್ಯ ಸರಕಾರ ಶಾಲಾರಂಭಕ್ಕೆ ಮುಂದಾಗಿದ್ರೆ, ಯು.ಕೆ.ವೈರಸ್ ಭೀತಿಯಿಂದಾಗಿ ಪೋಷಕರು ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಶಿಕ್ಷಣ ಸಚಿವರು ಮಾತ್ರ ಶಾಲಾರಂಭ ಮಾಡಿಯೇ ಮಾಡುತ್ತೇನೆಂದು ಪಟ್ಟು ಹಿಡಿದಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿಯೇ ಪ್ರಸಕ್ತ ವರ್ಷದಲ್ಲಿ ಶೈಕ್ಷಣಿಕ ಚಟುವಟಿಕೆ ಇನ್ನೂ ಆರಂಭಗೊಂಡಿಲ್ಲ. ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಈಗಾಗಲೇ ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಶಿಕ್ಷಣವನ್ನು ನೀಡುತ್ತಿದ್ರೆ, ಅನುದಾನಿತ ಮತ್ತು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಹಾಗೂ ಚಂದನ ವಾಹಿನಿಯ ಸಂವೇದ ಕಾರ್ಯಕ್ರಮದ ಮೂಲಕ ಪಾಠ ಬೋಧನೆ ಮಾಡಲಾಗಿದೆ. ಈಗಾಗಲೇ ಶೇ.90ರಷ್ಟು ಪಾಠಗಳು ಮುಕ್ತಾಯವನ್ನು ಕಂಡಿದ್ದು, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶಿಕ್ಷಣವನ್ನ ಬೋಧಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮುಂದಿನ ಒಂದೆರಡು ತಿಂಗಳ ಕಾಲ ಪುನರ್ಮನನ ತರಗತಿಗಳನ್ನು ನಡೆಸಿದ್ರೂ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿಯೇ ಪರೀಕ್ಷೆಯನ್ನು ನಡೆಸಿ ಶೈಕ್ಷಣಿಕ ವರ್ಷವನ್ನು ಮುಕ್ತಾಯಗೊಳಿಸಬಹುದಾಗಿದೆ.

ಆದರೆ ರಾಜ್ಯ ಸರಕಾರ ದೇಶದಲ್ಲಿ ಯು.ಕೆ. ವೈರಸ್ ಭೀತಿಯ ನಡುವಲ್ಲೇ ಶಾಲಾರಂಭಕ್ಕೆ ಸಜ್ಜಾಗಿದೆ. ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೊತೆ ಜೊತೆಗೆ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆಯನ್ನೂ ಜಾರಿಗೊಳಿಸುತ್ತಿದೆ. ಸಾಲದಕ್ಕೆ ಉಳಿದ ತರಗತಿಗಳಿಗೂ ಶಾಲೆಗಳನ್ನು ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಆದ್ರೆ ತರಾತುರಿಯಲ್ಲಿ ಆದೇಶ ಹೊರಡಿಸಿದ್ದರೂ ಕೂಡ ಶಿಕ್ಷಣ ಇಲಾಖೆ ಯಾವುದೇ ಸಿದ್ದತೆಗಳನ್ನೂ ಮಾಡಿಕೊಂಡಂತಿಲ್ಲ.ಇನ್ನೊಂದೆಡೆ ಸರಕಾರ ರೂಪಿಸಿರುವ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಸುಲಭದ ಮಾತಲ್ಲ.

ಬಹುತೇಕ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿಗಳ ಅಭಾವವಿದೆ. ಇಂತಹ ಪರಿಸ್ಥಿತಿಯಲ್ಲಿ ತರಗತಿಯಲ್ಲಿ ಕೇವಲ 15 ಮಕ್ಕಳನ್ನು ಕೂರಿಸಿ ಪಾಠ ಬೋಧನೆ ಮಾಡುವುದು ಕಷ್ಟ ಸಾಧ್ಯ. ದುರಂತವೆಂದ್ರೆ ಬಹುತೇಕ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಸರಿಯಾದ ಶೌಚಾಲಯವಿಲ್ಲ. ಜೊತೆಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಸಾರ್ವಜನಿಕ ಸಾರಿಗೆಯನ್ನೇ ಆಶ್ರಯಿಸಬೇಕಾಗಿದೆ. ಇನ್ನೊಂದೆಡೆ ಖಾಸಗಿ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದಾಗಿ ಮಕ್ಕಳನ್ನು ಶಾಲೆಗಳಲ್ಲಿ ನಿಭಾಯಿಸುವುದು ಕೂಡ ಸವಾಲಿನ ಕೆಲಸವೇ ಸರಿ.

ಎಸ್ಎಸ್ಎಲ್ ಸಿ, ಪಿಯುಸಿ ತರಗತಿಗಳ ಸಾಧಕ ಬಾಧಕಗಳನ್ನು ನೋಡಿಕೊಂಡು ವಿದ್ಯಾಗಮ ಜಾರಿಗೊಳಿಸಬೇಕಾಗಿದ್ದ ಶಿಕ್ಷಣ ಇಲಾಖೆ ಗಡಿಬಿಡಿಯಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರುತ್ತಿದೆ. ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕಕ್ಕೆ ಬರುವ ಶಿಕ್ಷಕರನ್ನು ಮದ್ಯಾಹ್ನದ ಅವಧಿಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕಕ್ಕೆ ತರುವ ಅಗತ್ಯವೇನಿತ್ತು ? ಒಂದೆಡೆ ಯು.ಕೆ. ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಜಾರಿಗೆ ತರಲು ಸಲಹೆ ನೀಡಿದ್ದ ಕೋವಿಡ್ ತಾಂತ್ರಿಕ ಸಮಿತಿ ಹಾಗೂ ಶಿಕ್ಷಣ ತಜ್ಞರು ಇನ್ನೊಂದೆಡೆ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸರಕಾರ ಪೋಷಕರಿಂದ ಅಭಿಪ್ರಾಯವನ್ನು ಸಂಗ್ರಹಿಸದೇ ಕೇವಲ ತಜ್ಞರ ವರದಿಯನ್ನಷ್ಟೇ ಪರಿಗಣನೆಗೆ ತೆಗೆದುಕೊಳ್ಳುವುದು ಎಷ್ಟು ಸರಿ ಅನ್ನೋದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಕೊರೊನಾ ವೈರಸ್ ವೈರಸ್ ಸೋಂಕಿನ ಅಬ್ಬರದ ನಡುವಲ್ಲೇ ಖಾಸಗಿ ಹಾಗೂ ಸರಕಾರಿ ಬಸ್ಸುಗಳು ಜನರಿಂದಲೇ ತುಂಬಿ ತುಳುಕುತ್ತಿವೆ. ಬಸ್ಸುಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಶಾಲಾರಂಭವಾದ ನಂತರದಲ್ಲಿ ವಿದ್ಯಾರ್ಥಿಗಳು ಇಂತಹ ಬಸ್ಸುಗಳಲ್ಲಿಯೇ ಪ್ರಯಾಣಿಸಬೇಕಾಗಿದೆ. ಬಸ್ಸುಗಳಲ್ಲಿ ಕೊರೊನಾ ಸೋಂಕಿತರಿದ್ರೆ ವಿದ್ಯಾರ್ಥಿಗಳಿಗೂ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ. ಇನ್ನು ಶಿಕ್ಷಕರಿಗೆ ಕಡ್ಡಾಯ ಕೊರೊನಾ ತಪಾಸಣೆ ಮಾಡಿಸುವಂತೆ ಸರಕಾರ ಹೇಳಿದೆ. ಆದರೆ ಶಿಕ್ಷಕರು ಪ್ರತಿನಿತ್ಯವೂ ಕೊರೊನಾ ತಪಾಸಣೆ ಮಾಡಲು ಸಾಧ್ಯವಿದೆಯೇ ? ಶಿಕ್ಷಕರು ನಿತ್ಯವೂ ದೂರದ ಊರುಗಳಿಂದ ಬರುವುದರಿಂದಾಗಿ ಅವರಿಂದಲೂ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಭೀತಿಯಿದೆ. ಸರಕಾರ ಶಾಲಾರಂಭ ಮಾಡಿ ಮಕ್ಕಳಿಗೆ ರಕ್ಷಣೆ ನೀಡುವ ಕಾಳಜಿ ಇದ್ದರೆ, ಪ್ರತೀ ಶಾಲೆಗೂ ಸರಕಾರ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಿ ಅಂತ ಪೋಷಕರಾದ ಗಿರಿಜಾ ಅವರು ಆಗ್ರಹಿಸಿದ್ದಾರೆ.

ನನ್ನ ಮಗ ಹೋಗುವ ಶಾಲೆಯಲ್ಲಿ ಎಸ್ಎಸ್ಎಲ್ ಸಿಯಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲೆಯಲ್ಲಿರುವ ಶಿಕ್ಷಕರ ಸಂಖ್ಯೆ ತೀರಾ ಕಡಿಮೆ ಸರಕಾರ ಹೇಳಿದಂತೆ 15 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುವುದು ಸಾಧ್ಯವಿಲ್ಲ. ಶಿಕ್ಷಕರ ಕೊರತೆಯಿಂದಾಗಿ ಉಳಿದ ತರಗತಿಗಳಿಗೆ ಸರಕಾರ ಏನು ಕ್ರಮಕೈಗೊಳ್ಳುತ್ತದೆ. ಅಷ್ಟೇ ಅಲ್ಲಾ ಶಿಕ್ಷಕರು ಮಕ್ಕಳನ್ನು ಅವರ ಪಾಡಿಗೇ ಬಿಟ್ಟರೆ ಪರಸ್ಪರ ಸಂಪರ್ಕಕ್ಕೆ ಬರುವ ಸಾಧ್ಯತೆಯಿದೆ. ಇಷ್ಟು ದಿನಗಳ ಕಾಲ ಕೊರೊನಾ ಸೋಂಕಿನಿಂದ ಮನೆಯಲ್ಲಿಯೇ ಸಂರಕ್ಷಣೆ ಮಾಡಿದ್ದ ಮಕ್ಕಳನ್ನು ಯಾವ ಧೈರ್ಯದ ಮೇಲೆ ಶಾಲೆಗೆ ಕಳುಹಿಸಲಿ ಎನ್ನುತ್ತಾರೆ ಪೋಷಕರಾದ ಸತೀಶ್.

ಹಾಜರಾತಿ ಕಡ್ಡಾಯವಲ್ಲ, ದಾಖಲಾತಿ ಕಡ್ಡಾಯ ..!
ರಾಜ್ಯ ಸರಕಾರ ಶಾಲಾರಂಭಕ್ಕೆ ಮುಂದಾಗುತ್ತಿದ್ದಂತೆಯೇ ಕೆಲ ಪೋಷಕರು ಸರಕಾರ ನಿರ್ಧಾರವನ್ನು ಬೆಂಬಲಿಸಿದ್ದರೂ ಕೂಡ ಹಲವು ಪೋಷಕರು ವಿರೋಧಿಸುತ್ತಿದ್ದಾರೆ. ರಾಜ್ಯ ಸರಕಾರ ಯು.ಕೆ. ವೈರಸ್ ಸೋಂಕಿನ ತಪಾಸಣಾ ವರದಿಯಲ್ಲಿ ರಾಜ್ಯದಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದೆ. ಇನ್ನೊಂದೆಡೆ ರಾಜ್ಯ ಸರಕಾರ ಶಾಲಾರಂಭವಾದರೂ ಕೂಡ ಕಡ್ಡಾಯವಾಗಿ ವಿದ್ಯಾರ್ಥಿಗಳು ಶಾಲೆಗೆ ಬರಲೇ ಬೇಕೆಂಬ ನಿಯಮವಿಲ್ಲ ಎಂದಿದೆ. ಆದರೆ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ದಾಖಲಾತಿ ಮಾಡಲೇ ಬೇಕೆಂದಿದೆ. ರಾಜ್ಯ ಸರಕಾರ ಕೇವಲ ದಾಖಲಾತಿಗಾಗಿಯೇ ಶಾಲಾರಂಭಕ್ಕೆ ಮುಂದಾಗಿದೆ ಅನ್ನೋ ಆರೋಪ ಪೋಷಕರ ವಲಯದಲ್ಲಿ ಕೇಳಿಬರುತ್ತಿದೆ.

Comments are closed.