ಉಡುಪಿ : ಕಳೆದೆರಡು ದಿನಗಳಿಂದಲೂ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಡುಪಿ ಜಿಲ್ಲೆ ತತ್ತರಿಸಿ ಹೋಗಿದೆ. ಉಡುಪಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದ್ದು, ಉಡುಪಿ – ಮಂಗಳೂರು, ಉಡುಪಿ – ಮಣಿಪಾಲ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಮನೆಗಳು ಜಲಾವೃತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ಧಾವಿಸಿದ ಎನ್.ಡಿ.ಆರ್.ಎಫ್ ಹಾಗೂ ಹೆಲಿಕಾಪ್ಟರ್ ಗಳನ್ನು ತರಿಸಿಕೊಳ್ಳಲಾಗಿದೆ.

ಉಡುಪಿ ನಗರ ಕಲ್ಸಂಕ ,ಬೈಲಕೆರೆ, ಮಠದಬೆಟ್ಟು,ರಾಜಾಂಗಣ ಪಾರ್ಕಿಂಗ್ ಪ್ರದೇಶ, ಶಿರಿಬೀಡು, ಮೂಡನಿಡಂಬೂರು ಪ್ರದೇಶದಲ್ಲಿ ನೆರೆ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೂರಾರು ಮನೆಗಳು ಮುಳುಗಡೆಯಾಗಿವೆ. ಸ್ಥಳೀಯ ಯುವಕರು ತೆಪ್ಪಗಳ ಮೂಲಕ ಜನರನ್ನು ರಕ್ಷಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ . ಕಲ್ಸಂಕ ಕಡಿಯಾಳಿ ಪ್ರಮುಖ ರಸ್ತೆ ನೆರೆ ನೀರಿನಿಂದ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತ ಗೊಂಡಿದೆ.

ಬ್ರಹ್ಮಾವರ ತಾಲೂಕಿನಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ಬ್ರಹ್ಮಾವರದ ಹಂಗಾರಕಟ್ಟೆ ಬಾಳ್ಕುದ್ರುವಿನಲ್ಲಿ ಸುಮಾರು 40 ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದರೆ. ಗುಂಡ್ಮಿ ಬಡಾ ಆಲಿತೋಟ, ಚೆಲ್ಲೆಮಕ್ಕಿ, ಕೋಟ ದಾನಗುಂದ, ಪಾರಂಪಳ್ಳಿ, ಪಡುಕೆರೆ ಪ್ರದೇಶಗಳಲ್ಲಿ ಕೃತಕ ನೆರೆ ಹಾವಳಿ ಸೃಷ್ಟಿಯಾಗಿದ್ದು, ಸಾವಿರಾರು ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ.

ನೆರೆ ಹಾವಳಿಯಲ್ಲಿ ಸಿಲುಕಿರುವವರ ರಕ್ಷಣಗೆ ಈಗಾಗಲೇ ಎನ್ ಡಿಆರ್ ಎಫ್ ತಂಡ ಹಾಗೂ ಹೆಲಿಕಾಪ್ಟರ್ ಗಳನ್ನು ತರಿಸಿಕೊಳ್ಳಲಾಗಿದ್ದು, ನೆರೆ ಪ್ರದೇಶದಲ್ಲಿ ಸಿಲುಕಿರುವ ಸುಮಾರು 250ಕ್ಕೂ ಅಧಿಕ ಮಂದಿಯನ್ನು ಈಗಾಗಲೇ ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.



