ಕೊರೋನಾ ಸಂಕಷ್ಟದ ನಡುವೆಯೇ ವಾಹನ ಸವಾರರಿಗೆ ಪ್ರತಿನಿತ್ಯ ಶಾಕ್ ಎದುರಾಗುತ್ತಿದ್ದು, ಕಳೆದ ಎರಡು ವರ್ಷದಲ್ಲೇ ಅತ್ಯಂತ ಹೆಚ್ಚಿನ ಇಂಧನ ಬೆಲೆ ಕಂಡು ಬಳಕೆದಾರರು ಕಂಗಾಲಾಗಿದ್ದಾರೆ.

ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಭಾನುವಾರ ಪೆಟ್ರೋಲ್ ದರ 28 ಪೈಸೆ ಏರಿಕೆ ಕಂಡಿದ್ದರೇ, ಡಿಸೇಲ್ ದರ 29 ಪೈಸೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ತೈಲ ಕಂಪನಿಗಳು ತೈಲ ಬೆಲೆ ಏರಿಸಿದ ಬೆನ್ನಲ್ಲೇ, ಭಾರತದಲ್ಲೂ ತೈಲ ಬೆಲೆ ಏರಿಕೆಯಾಗಿದ್ದು, ಬೆಂಗಳೂರಲ್ಲಿ ಇವತ್ತಿನ ಪೆಟ್ರೋಲ್ ದರ 86.20 ರೂಪಾಯಿ ಆಗಿದ್ದರೇ, ಡಿಸೇಲ್ ದರ 78.03 ರೂಪಾಯಿಗೆ ತಲುಪಿದೆ.

ಭಾರತದಲ್ಲೇ ಗರಿಷ್ಠ ಪೆಟ್ರೋಲ್ ದರವನ್ನು ಮಾಯಾನಗರಿ ಮುಂಬೈ ದಾಖಲಿಸಿದ್ದು, ಅಲ್ಲಿ ಪೆಟ್ರೋಲ್ ಲೀಟರ್ ಗೆ 90.05 ರೂಪಾಯಿ ಇದ್ದರೇ, ಡಿಸೇಲ್ ದರ 80.23 ಕ್ಕೆ ನೆಗೆದಿದೆ.ಕೊರೋನಾ ಲಸಿಕೆಯಿಂದ ಜನಜೀವನ ಸಹಜ ಸ್ಥಿತಿಗೆ ಬರುವ ಸಾಧ್ಯತೆಗಳು ದಟ್ಟವಾಗಿರುವ ಕಾರಣಕ್ಕೆ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇದರಿಂದ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ದಾಖಲೆಯ ಏರಿಕೆಯಾಗಿದೆ.

ನವೆಂಬರ್ ನಿಂದ ಆರಂಭಿಸಿ ಇಲ್ಲಿಯವರೆಗೂ ಸುಮಾರು 14 ಸಲ ದರ ಏರಿಕೆಯಾಗಿದ್ದು, ಕಳೆದ ಐದು ದಿನಗಳಿಂದ ಸತತ ಏರಿಕೆಯಾಗಿ 2018 ರಿಂದ ಇಲ್ಲಿಯವರೆಗಿನ ಗರಿಷ್ಠ ಪೆಟ್ರೋಲ್ ದರವನ್ನು ಭಾನುವಾರ ದಾಖಲಿಸಿದೆ.