ಮಾರ್ಚ್ 31ರ ವರೆಗೆ 1 ರಿಂದ 8 ತರಗತಿ ವಿದ್ಯಾರ್ಥಿಗಳಿಗಿಲ್ಲ ಶಾಲೆ …!

ಮಧ್ಯಪ್ರದೇಶ : ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ನಡುವಲ್ಲೇ ಕೊರೊನಾ ಎರಡನೇ ಅಲೆಯ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ 1ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ 2021ರ ಮಾರ್ಚ್ 31ರ ವರೆಗೆ ಶಾಲೆಗಳನ್ನು ತೆರೆಯದಿರಲು ತೀರ್ಮಾನಿಸಲಾಗಿದೆ.

8ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಈ ಬಾರಿ ಯಾವುದೇ ಪರೀಕ್ಷೆಗಳನ್ನು ಎದುರಿಸಬೇಕಾಗಿಲ್ಲ. ಕೇವಲ ಪ್ರಾಜೆಕ್ಟ್ ವರ್ಕ್ ಗಳ ಆಧಾರದ ಮೇಲೆಯೇ ವಿದ್ಯಾರ್ಥಿಗಳ ಮೌಲ್ಯ ಮಾಪನ ಮಾಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಅಂದಹಾಗೆ ಇಂತಹದೊಂದು ತೀರ್ಮಾನವನ್ನು ಕೈಗೊಂಡಿರುವುದು ಮಧ್ಯಪ್ರದೇಶ ಸರಕಾರ.

ಶೈಕ್ಷಣಿಕ ಚಟುವಟಿಕೆಗಳ ಆರಂಭದ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶಾಲೆಗಳ ಆಡಳಿತ ಮಂಡಳಿಯೊಂದಿಗೆ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ. ಶಾಲೆಗಳ ಪುನರಾರಂಭದಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ ಅನ್ನುವ ತೀರ್ಮಾನಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 31ರ ವರೆಗೆ ಯಾವುದೇ ದೈನಂದಿನ ತರಗತಿಗಳನ್ನು ನಡೆಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.

ಆದರೆ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ತರಗತಿಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ತರಗತಿಗಳ ಆರಂಭದಿಂದಾಗುವ ಸಾಧಕ, ಬಾಧಕಗಳ ಕುರಿತು ಕೂಡ ತಜ್ಞರು ಹಾಗೂ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಗುತ್ತಿದ್ದು, ಶಾಲೆ, ಕಾಲೇಜುಗಳನ್ನು ಸದ್ಯದಲ್ಲಿ ಆರಂಭಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Comments are closed.