ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಕೇಳಿಬಂದಿರುವ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಂದು ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಈ ವೇಳೆಯಲ್ಲಿ ಸ್ಯಾಂಡಲ್ ವುಡ್ ನ ಸುಮಾರು 10 ರಿಂದ 15 ಮಂದಿ ನಟ, ನಟಿಯರ ಹೆಸರುಗಳನ್ನು ಹೇಳಿರುವುದಾಗಿ ಇಂದ್ರಜಿತ್ ಲಂಕೇಶ್ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.
ಸಿಸಿಬಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ ಇಂದ್ರಜಿತ್ ಲಂಕೇಶ್ ಅವರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದ ಕುರಿತು ನನಗೆ ತಿಳಿದಿದ್ದ ಮಾಹಿತಿಯ ಬಗ್ಗೆ ಸಾಕ್ಷಿ ಸಮೇತ ಸಿಸಿಬಿ ಅವರಿಗೆ ತಿಳಿಸಿದ್ದಾರೆ. ನಾನು ನೀಡಿರುವ ಹೇಳಿಕೆಗೆ ಈಗನೂ ಬದ್ದನಾಗಿರುತ್ತೇನೆ ಎಂದಿದ್ದಾರೆ.
ಸಿಸಿಬಿ ಪೊಲೀಸರು ನಡೆಸಿದ ವಿಚಾರಣೆಯ ವೇಳೆಯಲ್ಲಿ 10 ರಿಂದ 15 ಮಂದಿಯ ಹೆಸರನ್ನು ಹೇಳಿದ್ದೇನೆ. ಮಾತ್ರವಲ್ಲ ಕೆಲ ಸ್ಥಳಗಳ ಕುರಿತು ಮಾಹಿತಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಒದಗಿಸಿದ್ದೇನೆ. ಸಿಸಿಬಿ ಅಧಿಕಾರಿಗಳಿಗೆ ಡ್ರಗ್ಸ್ ಮಾಫಿಯಾದ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಆದರೆ ನಾನು ಹೆಸರನ್ನು ಬಹಿರಂಗ ಪಡಿಸಿದ್ರೆ ವಿಚಾರಣೆಗೆ ತೊಡಕಾಗುವ ಸಾಧ್ಯತೆಯಿದೆ. ಹೀಗಾಗಿ ನಾನು ಅವರನ್ನು ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಸುಮಾರು 5 ಗಂಟೆಗಳ ವಿಚಾರಣೆಯ ವೇಳೆಯಲ್ಲಿ ಹಲವು ದಾಖಲೆಗಳನ್ನು ಒದಗಿಸಿದ್ದೇನೆ ಎಂದರು.
ಯುವ ನಟ, ನಟಿಯರೇ ಡ್ರಗ್ಸ್ ಮಾಫಿಯಾದ ರಾಯಭಾರಿಗಳಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇಂಡಸ್ಟ್ರೀಗೆ ಬರುವ ಯುವ ಪೀಳಿಗೆಗೆ ಸಂದೇಶ ರವಾನೆಯಾಗಲಿ ಎಂದಿದ್ದಾರೆ.
ನಾನು ರಕ್ಷಣೆಯನ್ನು ಕೇಳಿಲ್ಲ ಬದಲಾಗಿ ಬೆಂಬಲವನ್ನು ಕೋರಿದ್ದೇನೆ. ನಾನು ನೀಡಿರುವ ಮಾಹಿತಿಯಿಂದಾಗಿ ಪೊಲೀಸರು ಕೂಡ ಖುಷಿಯಾಗಿದ್ದಾರೆ. ಶೀಘ್ರವೇ ಅಧಿಕಾರಿಗಳು ಈ ಬಗ್ಗೆ ದಾಖಲೆ ಸಮೇತ ಹೆಸರನ್ನು ಬಹಿರಂಗ ಪಡಿಸಲಿದ್ದಾರೆ. ನನಗೆ ಯಾವುದೇ ನಟರು, ರಾಜಕಾರಣಿಗಳ ಮಕ್ಕಳ ಬಗ್ಗೆ ಹೆದರಿಕೆ ಇಲ್ಲ. ನಾನು ಈ ಬಗ್ಗೆ ಸಾಕಷ್ಟು ತನಿಖೆ ನಡೆಸಿದ್ದು, ಆ ವೇಳೆ ಲಭ್ಯವಾದ ಕೆಲ ವಿಡಿಯೋ, ದಾಖಲೆಗಳನ್ನು ನೀಡಿದ್ದೇನೆ ಎಂದಿದ್ದಾರೆ.