ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಭಾರಿ ಮೊತ್ತದ ದಂಡ ಪಾವತಿಸಿ ಶಿಕ್ಷೆ ಅನುಭವಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಜ.೨೭ ರಂದು ಬಿಡುಗಡೆಯಾಗಲಿದ್ದಾರೆ.

ಜೈಲು ಶಿಕ್ಷೆ ಅವಧಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಹಾಗೂ ನ್ಯಾಯಾಲಯ ವಿಧಿಸಿದ್ದ ೧೦ ಕೋಟಿ ದಂಡಪಾವತಿಸಿದ ಹಿನ್ನೆಲೆಯಲ್ಲಿ ಜ.೨೭ ರಂದು ಶಶಿಕಲಾ ಬೆಂಗಳೂರಿನ ಪರಪ್ಪನಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಶಶಿಕಲಾ ಬಿಡುಗಡೆ ವಿಚಾರವನ್ನು ಶಶಿಕಲಾ ಪರ ವಕೀಲ ರಾಜ ಸೆಂತೂರ್ ಪಾಂಡಿಯನ್ ಖಚಿತಪಡಿಸಿದ್ದಾರೆ.ತಮಗೆ ಜೈಲಾಧಿಕಾರಿಗಳು ಮಾಹಿತಿನೀಡಿದ್ದಾರೆ ಎಂದು ರಾಜಸೆಂತೂರ್ ಹೇಳಿದ್ದಾರೆ.

ಆದಾಯಕ್ಕೂ ಮೀರಿ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಶಿಕಲಾ, ಇಳವರಸಿ ಹಾಗೂ ಸುಧಾಕರ್ ಗೆ ನ್ಯಾಯಾಲಯ ೨೦೧೭ ರಲ್ಲಿ ನಾಲ್ಕು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.

ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಪತಿಯ ಅನಾರೋಗ್ಯ ಹಾಗೂ ನಿಧನದ ವೇಳೆ ಪೆರೋಲ್ ಪಡೆದು ತಮಿಳುನಾಡಿಗೆ ತೆರಳಿದ್ದರು.

ಈಗ ಜನವರಿ ೨೭ ರಂದು ಬಿಡುಗಡೆಗೊಳ್ಳಲಿದ್ದು, ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳಿರುವಾಗ ಶಶಿಕಲಾ ಬಿಡುಗಡೆಯಾಗುತ್ತಿರುವುದು ತಮಿಳುನಾಡಿನ ರಾಜಕೀಯದ ಮೇಲೆ ಪ್ರಭಾವ ಬೀರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.