ಕಾರ್ಕಳ : ಮೈಸೂರಿನಿಂದ ಪ್ರವಾಸಕ್ಕೆಂದು ಮಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಬಂಡೆಗೆ ಬಡಿದು 9 ಮಂದಿ ಸಾವನ್ನಪ್ಪಿರೋ ದುರ್ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಮಾಳದಲ್ಲಿ ನಡೆದಿದೆ.

ಮೃತಪಟ್ಟವರನ್ನು ರಾಧಾ (22), ರವಿ (22), ಬಸವರಾಜ್ (22), ಅನುಜ್ಞಾ (21), ಪಿ.ರಂಜಿತಾ (21), ಪ್ರೀತಂ ಗೌಡ, ಶಾರೋಲ್ (21), ಯೋಗೆಂದ್ರ (22) ಹಾಗೂ ಚಾಲಕ ಮಾರುತಿ ಎಂದು ಗುರುತಿಸಲಾಗಿದೆ. ಮೈಸೂರಿನ ಬೆಳವಾಡಿಯಲ್ಲಿರುವ ಜರ್ಮನಿ ಮೂಲದ ಸೆಂಚುರಿ ವೈಟಲ್ ರೆಕಾರ್ಡ್ ಕಂಪೆನಿಯ ಉದ್ಯೋಗಿಗಳು ಹೊರನಾಡು, ಶೃಂಗೇರಿ, ಮಂಗಳೂರು ಹಾಗೂ ಮುರುಡೇಶ್ವರಕ್ಕೆಂದು ಪ್ರವಾಸಕ್ಕೆ ಹೊರಟಿದ್ದರು. ಹೀಗಾಗಿ ಕಂಪೆನಿಯ ಸುಮಾರು 34 ಮಂದಿ ಉದ್ಯೋಗಿಗಳು ಫೆಬ್ರವರಿ 14 ರಂದು ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟಿದ್ದರು. ಹೊರನಾಡು, ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಮಂಗಳೂರಿನತ್ತ ತೆರಳುತ್ತಿದ್ದ ವೇಳೆಯಲ್ಲಿ ಕಾರ್ಕಳ ಚಿಕ್ಕಮಗಳೂರು ಗಡಿಭಾಗದಲ್ಲಿರುವ ಘಾಟ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮಂಗಳೂರಿನತ್ತ ಬರುತ್ತಿದ್ದ ಬಸ್ ಮಾಳದ ಸಮೀಪದಲ್ಲಿ ಬರುತ್ತಿದ್ದಂತೆಯೇ ರಸ್ತೆ ಕಿರಿದಾಗಿದ್ದು, ರಸ್ತೆಯ ಎರಡೂ ಕಡೆಗಳಲ್ಲಿ ಬಂಡೆಯಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಬಂಡೆಗೆ ಢಿಕ್ಕಿ ಹೊಡೆದಿದೆ, ಘಟನೆಯಲ್ಲಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಇಬ್ಬರು ಆಸ್ಪತ್ರೆಗೆ ಸೇರಿಸೋ ಮಾರ್ಗಮಧ್ಯದಲ್ಲಿ ಸಾವಪ್ಪದಿದ್ದಾರೆ. ಗಾಯಾಳುಗಳನ್ನು ಮಣಿಪಾಲ, ಮೂಡಬಿದಿರೆ ಹಾಗೂ ಕಾರ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಬೆಂಗಳೂರಿನ ಡಿ.ಬಿ.ಟ್ರಾವೆಲ್ಸ್ ಗೆ ಸೇರಿದ ಬಸ್ಸು ಎಂದು ತಿಳಿದುಬಂದಿದೆ. ತಿರುವಿನ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ದುರ್ಘಟನೆಯ ಕುರಿತು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಅಪಘಾತದ ಕುರಿತು ವಿಡಿಯೋ ನೋಡಲು ಕ್ಲಿಕ್ ಮಾಡಿ…