ಬಿ.ವೈ.ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಯಡಿಯೂರಪ್ಪ ಮುಹೂರ್ತ !

0

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಸಕ್ರೀಯ ರಾಜಕಾರಣದಿಂದ ದೂರವಾಗ್ತಾರಾ ? ತನ್ನ ಪುತ್ರ ವಿಜಯೇಂದ್ರನಿಗೆ ಪಟ್ಟಕಟ್ಟಿ ಅಧಿಕಾರದಿಂದ ಕೆಳಗಿಳಿಯುತ್ತಾರಾ ? ವಿಜಯೇಂದ್ರ ಪಟ್ಟಾಭಿಷೇಕಕ್ಕೆ ನಿಜಕ್ಕೂ ಮುಹೂರ್ತ ಫಿಕ್ಸ್ ಆಗಿದ್ಯಾ ?. ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದ್ರೆ ಯಡಿಯೂರಪ್ಪ ನಡವಳಿಕೆ, ದಿನೇ ದಿನೇ ಹೆಚ್ಚುತ್ತಿರೋ ವಿಜಯೇಂದ್ರ ವರ್ಚಸ್ಸು ಜೊತೆಗೆ ಸಂಘಪರಿವಾರದ ನಾಯಕರ ಹೇಳಿಕೆ ಪುಷ್ಪಿ ನೀಡುತ್ತಿದ್ದು, ವಿಜಯೇಂದ್ರ ಪಟ್ಟಾಭಿಷೇಕದ ಇನ್ಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಕರ್ನಾಟಕ ರಾಜ್ಯವನ್ನು ಇದುವರೆಗೆ 19 ಮಂದಿ ಮುಖ್ಯಮಂತ್ರಿಗಳು ಆಳಿದ್ದಾರೆ. ಆದ್ರೆ 4 ಬಾರಿ ರಾಜ್ಯದ ಮುಖ್ಯಮಂತ್ರಿ ಗದ್ದುಗೇರದಿದ್ದ ದಾಖಲೆ ಬರೆದವರು ಬಿ.ಎಸ್.ಯಡಿಯೂರಪ್ಪ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ರಾಜಕೀಯವಾಗಿ ಬೆಳೆದಿದ್ದು ಮಾತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಶಿಕಾರಿಪುರದ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗಿನ ಯಡಿಯೂರಪ್ಪ ಅವರ ಜರ್ನಿಯೇ ಒಂದು ರೋಚಕ ಅಧ್ಯಾಯ.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಹೆಸರು ಹೇಳದವರೇ ಇಲ್ಲದ ಕಾಲದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಇದೇ ಯಡಿಯೂರಪ್ಪ. ಕರ್ನಾಟಕ ರಾಜ್ಯದಲ್ಲಿ ಏಕೈಕ ಬಿಜೆಪಿಯ ಶಾಸಕರಾಗಿ ಆಯ್ಕೆಯಾದವರೂ ಕೂಡ ಯಡಿಯೂರಪ್ಪ. ಕೇವಲ ಒಂದು ಶಾಸಕ ಸ್ಥಾನದಿಂದ ನಾಲ್ಕು ಬಾರಿ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ಆಡಳಿತಕ್ಕೆ ತಂದವರು ಕೂಡ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ.

ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಕೆಸರಿಯ ಪತಾಕೆಯನ್ನು ಹಾರಿಸಿದವರು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ. ಆದರೆ ತಮ್ಮ ಮೇಲಿನ ಆರೋಪಗಳಿಂದಾಗಿ ಜೈಲು ಸೇರಿದ್ದ ಬಿಎಸ್ ವೈ ನಂತರ ಪಕ್ಷವನ್ನೇ ತೊರೆದು ಕರ್ನಾಟಕ ಜನತಾಪಕ್ಷವನ್ನು ಕಟ್ಟಿದ್ರು. ಆ ಮೂಲಕ ಬಿಜೆಪಿಗೆ ರಾಜ್ಯದಲ್ಲಿ ಸರಿಯಾಗಿ ಹೊಡೆತವನ್ನೇ ನೀಡಿದ್ರು. ಆದ್ರೆ ಮರಳಿ ಬಿಜೆಪಿ ಸೇರಿದ್ದ ಬಿಎಸ್ವೈ ರಾಜ್ಯದಾದ್ಯಂತ ಪಕ್ಷ ಸಂಘಟನೆಯ ಹೊಣೆ ಹೊತ್ತು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಯಲ್ಲಿ ತಂದು ಕೂರಿಸಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಪ್ರಭಾವಿಗಳಾಗಿದ್ದರೂ, ರಾಜ್ಯದಲ್ಲಿ ಇಂದಿಗೂ ಬಿಜೆಪಿಯೆಂದ್ರೆ ಯಡಿಯೂರಪ್ಪ ಅಂತಾನೇ ಬಾವಿಸುವಷ್ಟರ ಮಟ್ಟಿಗೆ ರಾಜ್ಯದಲ್ಲಿ ತನ್ನ ಪ್ರಭಾವವನ್ನು ಬೀರಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿಯಷ್ಟೇ ಅಲ್ಲಾ ಪ್ರತಿಪಕ್ಷ ನಾಯಕನಾಗಿಯೂ ರಾಜ್ಯ ಸರಕಾರವನ್ನೇ ಅಲುಗಾಡಿಸುವ ಶಕ್ತಿಯನ್ನು ಹೊಂದಿದ್ದವರು. ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿಯುವವರೆಗೂ ಹೈಕಮಾಂಡ್ ಮಟ್ಟದ ವರೆಗೂ ಯಡಿಯೂರಪ್ಪ ಅಷ್ಟಕಷ್ಟೇ ಆಗಿದ್ರು. ಆದರೆ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಗೆಲ್ಲಿಸಿ ರಾಜ್ಯದಲ್ಲಿ ಸರಕಾರವನ್ನು ಸುಭದ್ರವನ್ನಾಗಿಸುತ್ತಲೇ ಯಡಿಯೂರಪ್ಪ ಪ್ರಭಾವ ಬಿಜೆಪಿ ಹೈಕಮಾಂಡ್ ಗೂ ಅರಿವಾಗಿ ಹೋಗಿತ್ತು. ಆದ್ರೆ ಯಡಿಯೂರಪ್ಪ ಅವರ ವಯಸ್ಸು ಸಕ್ರೀಯ ರಾಜಕಾರಣಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ಹೀಗಾಗಿಯೇ ಯಡಿಯೂರಪ್ಪ ತನ್ನ ಪುತ್ರ ಬಿ.ವೈ.ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಸಜ್ಜಾಗಿದ್ದಾರೆ.

ಯಡಿಯೂರಪ್ಪ ಮೊದಲ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದರಾಗಿದ್ದಾರೆ. ಎರಡನೇ ಪುತ್ರ ಬಿ.ವೈ.ರಾಘವೇಂದ್ರ ಕೂಡ ತಂದೆಯಂತೆಯೇ ಪ್ರಭಾವಿ ರಾಜಕಾರಣಿಯಾಗೋ ಮನಸ್ಸು ಮಾಡಿದವರು. ಆದರೆ ಯಡಿಯೂರಪ್ಪ ಜೈಲು ಸೇರೋದಕ್ಕೂ ವಿಜಯೇಂದ್ರ ಕಾರಣ ಅನ್ನೋ ಆರೋಪ ಕೇಳಿಬಂದಿತ್ತು. ಇದೇ ಕಾರಣದಿಂದಲೇ ವಿಜಯೇಂದ್ರ ಕೂಡ ರಾಜಕೀಯದಿಂದ ದೂರ ಉಳಿದಿದ್ದರು.

ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕ ಸ್ಥಾನದಲ್ಲಿ ಸ್ಪರ್ಧಿಸೋದಕ್ಕೆ ಮನಸ್ಸು ಮಾಡಿದ್ರು. ಅಲ್ಲದೇ ಕ್ಷೇತ್ರದಲ್ಲಿ ವಿಜಯೇಂದ್ರ ಗೆಲುವು ಖಚಿತ ಅನ್ನೋ ಮಾತುಗಳು ಕೂಡ ಕೇಳಿಬಂದಿತ್ತು. ಆದೆ ಬಿಜೆಪಿ ಹೈಕಮಾಂಡ್ ಕೊನೆಯ ಗಳಿಗೆಯಲ್ಲಿ ವಿಜಯೇಂದ್ರಗೆ ಅವಕಾಶವನ್ನೇ ಕೈಚೆಲ್ಲಿತ್ತು. ಆದರೂ ಸುಮ್ಮನೇ ಕೂರದ ವಿಜಯೇಂದ್ರ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನವನ್ನು ಗಳಿಸಿದ್ರೂ ಬಿಜೆಪಿಗೆ ಸರಕಾರ ರಚಿಸೋದಕ್ಕೆ ಸಾಧ್ಯವಾಗಿರಲಿಲ್ಲ. ಆದ್ರೆ ಜೆಡಿಎಸ್ – ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಖೆಡ್ಡಾಕ್ಕೆ ಬೀಳಿಸುವಲ್ಲಿಯೂ ವಿಜಯೇಂದ್ರ ಪಾತ್ರ ಮಹತ್ತರವಾದದು. ಬಹುತೇಕ ರೆಬೆಲ್ ಶಾಸಕರ ಜೊತೆ ವಿಜಯೇಂದ್ರ ಡೀಲ್ ಕುದುರಿಸುತ್ತಿರೋ ಆಡಿಯೋ ಲೀಕ್ ಆಗಿ ರಾಜ್ಯಮಟ್ಟದಲ್ಲಿಯೂ ಬಾರಿ ಸುದ್ದಿಯಾಗಿತ್ತು. ಮಾತ್ರವಲ್ಲ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದವರು ಕೂಡ ಇದೇ ವಿಜಯೇಂದ್ರ. ರಾಜ್ಯದಲ್ಲಿ ಅನರ್ಹರ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಪ್ರಾಬ್ಯಲ್ಯವಿರೋ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣ ಗೌಡ ಗೆಲ್ಲುವುದೇ ಇಲ್ಲಾ ಅಂತಾ ಖುದ್ದು ಬಿಜೆಪಿ ನಾಯಕರೇ ಬಾವಿಸಿಕೊಂಡಿದ್ದರು. ಆದರೆ ಹೈಕಮಾಂಡ್ ಗೆ ಕೊಟ್ಟ ಮಾತಿನಂತೆಯೇ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿದ್ದ ವಿಜಯೇಂದ್ರ ಹೈಕಮಾಂಡ್ ಮೆಚ್ಚುಗೆಗಳಿಸಿದ್ದರು.

ಚುನಾವಣಾ ಗೆಲುವಿನ ಬೆನ್ನಲ್ಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷರಾಗಿದ್ದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು. ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದ ವಿಜಯೇಂದ್ರ ತನ್ನ ಶಕ್ತಿಯನ್ನು ಹೈಕಮಾಂಡ್ ಗೆ ಸಾಬೀತುಪಡಿಸಿದ್ದಾರೆ. ಹೈಕಮಾಂಡ್ ಭೇಟಿಯ ಬೆನ್ನಲ್ಲೇ ರಾಜ್ಯದಲ್ಲಿಯೂ ವಿಜಯೇಂದ್ರ ತನ್ನ ಪ್ರಭಾವ ಬೀರುತ್ತಿದ್ದಾರೆ. ಸರಕಾರಿ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ರಾಜ್ಯ ಯುವ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಈಗಾಗಲೇ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಮಾತ್ರವಲ್ಲ ಮೈಸೂರು ಕರ್ನಾಟಕ ಭಾಗಗಳಲ್ಲಿ ಮುಂದಿನ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸೋ ಪಣತೊಟ್ಟಿದ್ದಾರೆ. ಈ ಮೂಲಕ ತನ್ನ ತಂದೆಯ ಹುಟ್ಟೂರಿನ ಜನರ ಋಣವನ್ನು ತೀರಿಸೋದಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಇದೇ ಹೊತ್ತಲಲ್ಲೇ ಯಡಿಯೂರಪ್ಪ ಮಗನನ್ನು ಶಾಸಕರನ್ನಾಗಿ, ಸಚಿವನನ್ನಾಗಿ ಮಾಡಲು ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯ ಮಗ ಅನ್ನೋದನ್ನೂ ಬಿಟ್ಟು ತನ್ನದೇ ವೈಯಕ್ತಿಕ ವರ್ಚಸ್ಸಿನಲ್ಲಿಯೇ ರಾಜಕೀಯದ ಶಕ್ತಿಯಾಗಿ ಬೆಳೆಯೋದಕ್ಕೆ ವಿಜಯೇಂದ್ರ ಶ್ರಮಿಸುತ್ತಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸ್ಪರ್ಧೆ ಮಾಡೋದಿಲ್ಲಾ ಅನ್ನೋದನ್ನು ಸಂಘ ಪರಿವಾರದ ನಾಯಕರೇ ಖುದ್ದು ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೂ 80 ವರ್ಷ ದಾಟೋ ಯಡಿಯೂರಪ್ಪ ಮುಖ್ಯಮಂತ್ರಿಯ ಹುದ್ದೆಗೇರುವುದಕ್ಕೆ ವಯಸ್ಸಿನ ಅಂತರ ತೊಡಕಾಗಲಿದೆ. ಹೀಗಾಗಿಯೇ ಬಿ.ವೈ.ವಿಜಯೇಂದ್ರ ಅವರನ್ನೇ ತನ್ನ ಮುಂದಿನ ಉತ್ತರಾಧಿಕಾರಿಯನ್ನಾಗಿಸೋದಕ್ಕೆ ಯಡಿಯೂರಪ್ಪ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಮಂಡ್ಯ ಅಥವಾ ಮೈಸೂರು ಭಾಗದಿಂದ ಸ್ಪರ್ಧಿಸೋದು ಪಕ್ಕಾ ಆಗಿದೆ. ಹೀಗಾಗಿಯೇ ವಿಜಯೇಂದ್ರ ಪಕ್ಷದಲ್ಲಿ, ಸರಕಾರದಲ್ಲಿಯೂ ತನ್ನ ಪ್ರಭಾವ ಬೀರುತ್ತಿದ್ದಾರೆ.

ಸ್ಪೆಷಲ್ ಡೆಸ್ಕ್ ನ್ಯೂಸ್ ನೆಕ್ಸ್ಟ್ ಕನ್ನಡ

Leave A Reply

Your email address will not be published.