ಉಡುಪಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗೀಕರಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ನಗರದಲ್ಲಿ ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಯುಂಟು ಮಾಡಿದ್ದು, ಬಸ್ಸು ಓಡಿಸಿದಂತೆ ಚಾಲಕರನ್ನು ಅಡ್ಡಗಟ್ಟಿ ಒತ್ತಾಯ ಬಂದ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆಯಲ್ಲಿ ಹೋರಾಟಗಾರರು ಹಾಗೂ ಬಸ್ ಮಾಲಕರ ಜೊತೆ ವಾಗ್ವಾದ ನಡೆದಿದೆ. ಇದರಿಂದಾಗಿ ಉಡುಪಿ ಬಸ್ ನಿಲ್ದಾಣದಲ್ಲಿ ಕೆಲವು ಸಮಯದ ವರೆಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆಯಲ್ಲಿ ಹೋರಾಟಗಾರರು ಬಸ್ ಗಳನ್ನು ಅಡ್ಡಗಟ್ಟಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆಯೇ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆಯಲ್ಲಿ ರಾಜ್ಯ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಯತೀಶ್ ಕರ್ಕೇರ, ಅಝೀಝ್ ಉದ್ಯಾವರ, ಬಾಲಕೃಷ್ಣ ಶೆಟ್ಟಿ, ಅನ್ಸಾರ್ ಉಡುಪಿ, ಪ್ರಖ್ಯಾತ್ ಶೆಟ್ಟಿ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
