ಸದಾಕಾಲ ಬಿಜೆಪಿ ನಾಯಕ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಲೇ ಬಂದಿರುವ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳರನ್ನು ಶಾಶ್ವತವಾಗಿ ಪಕ್ಷದಿಂದ ಹೊರಹಾಕುವ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಯತ್ನಾಳರನ್ನು ಪಕ್ಷದಿಂದ ಹೊರಹಾಕಲು ಸಹಿಸಂಗ್ರಹ ಅಭಿಯಾನ ನಡೆದಿದೆ ಎಂಬ ಮಾಹಿತಿ ಬಿಜೆಪಿ ವಲಯದಿಂದ ಲಭ್ಯವಾಗಿದೆ.

ಮೊನ್ನೆಯಷ್ಟೇ ವಿಜಯಪುರದಲ್ಲಿ ಮಾತನಾಡಿದ್ದ ಶಾಸಕ ಬಸನಗೌಡ ಯತ್ನಾಳ್, ಪಂಚ ರಾಜ್ಯ ಚುನಾವಣೆ ಬಳಿಕ ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟು ಸತ್ಯ ಎಂದಿದ್ದರು. ಹೈಕಮಾಂಡ್ ಶೋಕಾಸ್ ನೋಟಿಸ್ ಬಳಿಕವೂ ಎಚ್ಚೆತ್ತುಕೊಳ್ಳದೇ ರಾಜ್ಯ ಬಿಜೆಪಿಗೆ ಮುಜುಗರ ತರುತ್ತಿರುವ ಯತ್ನಾಳ್ ಗೆ ಮೂಗುದಾರ ಹಾಕಲು ಈಗ ರಾಜ್ಯ ಬಿಜೆಪಿಯೇ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ರಾಜ್ಯದ ನಾಯಕರ ಹಾಗೂ ಸ್ವಪಕ್ಷಿಯರ ಬಗ್ಗೆಯೇ ಮುಜುಗರ ತರುವ ಹೇಳಿಕೆ ನೀಡುವ ಯತ್ನಾಳರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂಬ ಕೂಗು ಕೇಳಿಬಂದಿದೆ. ಕೇವಲ ಆಗ್ರಹ ಮಾತ್ರವಲ್ಲ ಇದಕ್ಕೆ ಪೂರಕವಾಗಿ ಸಹಿಸಂಗ್ರಹ ಅಭಿಯಾನವೂ ಗುಟ್ಟಾಗಿ ನಡೆದಿದೆಯಂತೆ.

ಸಿಎಂ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಈ ಅಭಿಯಾನ ನಡೆದಿದ್ದು, ಅಂದಾಜು 60 ಕ್ಕೂ ಅಧಿಕ ಶಾಸಕರು ಯತ್ನಾಳರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಆಗ್ರಹ ಪತ್ರಕ್ಕೆ ಸಹಿಮಾಡಿದ್ದಾರೆ ಎನ್ನಲಾಗುತ್ತಿದೆ. ಶೀಘ್ರವೇ ಇನ್ನಷ್ಟು ಶಾಸಕರ ಸಹಿ ಪಡೆದು ಪತ್ರವನ್ನು ರಾಜ್ಯಬಿಜೆಪಿ ನಾಯಕರಿಗೆ ಹಾಗೂ ವರಿಷ್ಠರಿಗೆ ಸಲ್ಲಿಸಲಾಗುವುದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಅಧಿವೇಶನದ ಸಂದರ್ಭದಲ್ಲೇ ಈ ಸಹಿಸಂಗ್ರಹವೂ ನಡೆದಿದ್ದು, ಯತ್ನಾಳ ಹೇಳಿಕೆಯಿಂದ ಮುಜುಗರ ಎದುರಿಸುವಂತಾಗ್ತಿರೋದರಿಂದ ಎಲ್ಲ ಶಾಸಕರು ಸಹಿ ನೀಡಿದ್ದಾರೆ ಎನ್ನಲಾಗ್ತಿದೆ. ಇದಲ್ಲದೇ ಹಲವು ಶಾಸಕರು ಯತ್ನಾಳ್ ಹೇಳಿಕೆಯಿಂದ ತಾವು ಎದುರಿಸುತ್ತಿರುವ ಮುಜುಗರವನ್ನು ಸಿಎಂ ಬಳಿಯೇ ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಒಟ್ಟಿನಲ್ಲಿ ಸದಾಕಾಲ ಸಿಎಂ ಬದಲಾವಣೆಯ ಜಪ ಮಾಡುತ್ತಿದ್ದ ಬಸನಗೌಡ ಯತ್ನಾಳ್ ಸಂಕಷ್ಟಕ್ಕೆ ತುತ್ತಾದಂತಿದ್ದು, ತಮ್ಮ ವಿರುದ್ಧ ಸಹಿಸಂಗ್ರಹದ ಅಭಿಯಾನದ ಕುರಿತು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.