ಬೆಂಗಳೂರು: ಪ್ರೀತಿ-ಪ್ರೇಮದ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಅನ್ಯ ಧರ್ಮಕ್ಕೆ ಸೆಳೆಯಲಾಗುತ್ತಿದೆ ಎಂಬ ಆರೋಪಗಳು ತೀವ್ರಗೊಂಡ ಬೆನ್ನಲ್ಲೇ ರಾಜ್ಯದಲ್ಲೂ ಮತಾಂತರ ನಿಷೇಧ ಕಾನೂನು ಜಾರಿ ಮಾಡುವ ಮುನ್ಸೂಚನೆ ಲಭ್ಯವಾಗಿದೆ.

ಆದರೇ ಯಾವ ಸ್ವರೂಪದ ಮತಾಂತರಕ್ಕೆ ನಿಷೇಧ ಹೇರಲಾಗುತ್ತದೆ. ಈ ಕಾಯಿದೆ ಜಾರಿ ಸಾಧ್ಯತೆ, ರೂಪುರೇಷೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕರ್ನಾಟಕ ರಾಜ್ಯದಲ್ಲೂ ಶೀಘ್ರ ಮತಾಂತರ ನಿಷೇಧ ಕಾನೂನು ಜಾರಿಗೆ ತರಲಾಗುತ್ತದೆ ಎಂದಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರಗೊಳ್ಳುವ ಪ್ರಕ್ರಿಯೆಯನ್ನು ನಿಷೇಧಿಸುವ ಕಾನೂನು ಜಾರಿಗೆ ತರಲಿದ್ದೇವೆ. ಜೆಹಾದಿಗಳು ನಮ್ಮ ಸಹೋದರಿಯರ ನಾವು ಮೌನವಾಗಿ ಇರುವುದಿಲ್ಲ .
ಮತಾಂತರ ದಲ್ಲಿ ಭಾಗಿಯಾಗುವವರಿಗೆ ಶೀಘ್ರ ಹಾಗೂ ಕಠಿಣ ಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗಷ್ಟೇ ಅಲಹಾಬಾದ್ ಕೋರ್ಟ್ ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರವಾಗುವುದನ್ನು ಒಪ್ಪಲಾಗದು ಎಂದಿತ್ತು. ಈ ತೀರ್ಪು ದೇಶದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ ಕರ್ನಾಟಕದಲ್ಲೂ ಲವ್ ಜೆಹಾದ್ ಹೆಸರಿನಲ್ಲಿ ಅವ್ಯಾಹತವಾಗಿ ಮತಾಂತರ ನಡೆಯುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಲೇ ಬಂದಿದ್ದು, ಇದೀಗ ಸರ್ಕಾರ ಈ ಕಾನೂನು ಜಾರಿಗೆ ಮುಂದಾದಲ್ಲಿ ಸಾಕಷ್ಟು ಪರ-ವಿರೋಧ ಹೋರಾಟಗಳು ಆರಂಭವಾಗಲಿದೆ.