ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಹಿನ್ನಡೆಯಾಗಿದೆ. ಎಸ್ಐಟಿ ಸಂತ್ರಸ್ಥೆಯನ್ನು ಮಾತ್ರ ವಿಚಾರಣೆ ಮಾಡುತ್ತಿದೆ. ರಮೇಶ್ ಜಾರಕಿಹೊಳಿ ವಿಚಾರಣೆ ಕರೆಯುತ್ತಿಲ್ಲ ಆರೋಪದ ನಡುವೆಯೇ ರಮೇಶ್ ಜಾರಕಿಹೊಳಿಗೆ ಕೊರೋನಾ ಸೋಂಕು ತಗುಲಿದೆ.

ಬೆಳಗಾವಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದ್ಯ ಎಸ್ಐಟಿ ವಿಚಾರಣೆಯಿಂದ ಬಚಾವ ಆಗಿದ್ದಾರೆ. ಸಿಡಿ ಪ್ರಕರಣ ಹೊರಬಂದ ಬಳಿಕ ಬೆಳಗಾವಿ ತೆರಳಿ ಮಾಧ್ಯಮಗಳಿಂದ ಹಾಗೂ ವಿಚಾರಣೆಯಿಂದ ದೂರ ಉಳಿದಿದ್ದ ರಮೇಶ್ ಜಾರಕಿಹೊಳಿಗೆ ಕೊರೋನಾ ಸೋಂಕು ತಗುಲಿದೆ.

ಈ ವಿಚಾರವನ್ನು ಸಚಿವ ಭೈರತಿ ಬಸವರಾಜು ಖಚಿತಪಡಿಸಿದ್ದಾರೆ. ನಾನು ಬೆಳಗಾವಿ ಚುನಾವಣೆ ಪ್ರಚಾರಕ್ಕೆ ತೆರಳುವ ಸಲುವಾಗಿ ಅವರನ್ನು ಸಂಪರ್ಕಿಸಿದ್ದೆ. ಆದ್ರೆ ಅವರು ತಮಗೆ ಕೊರೋನಾ ಸೋಂಕು ತಗುಲಿರುವ ವಿಚಾರವನ್ನು ಹೇಳಿದ್ದು , ಗುಣಮುಖರಾದ ಬಳಿಕ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ ಎಂದರು.

ಒಂದು ದಿನ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ ಬಳಿಕ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದರು. ಬಳಿಕ ಬೆಳಗಾವಿ ತೆರಳಿದ್ದರು. ಆದರೆ ಈಗ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲೇ ಇದ್ದಾರೆ ಎನ್ನಲಾಗಿದ್ದು, ಅನಾರೋಗ್ಯದ ಕಾರಣ ನೀಡಿ ವಿಚಾರಣೆಯಿಂದ ದೂರ ಉಳಿದಿದ್ದಾರೆ.

ಈಗ ರಮೇಶ್ ಜಾರಕಿಹೊಳಿಗೆ ಕೊರೋನಾ ತಗುಲಿರೋದರಿಂದ ಅವರು 14 ದಿನಗಳ ಕಾಲ ವಿಚಾರಣೆಯಿಂದ ದೂರು ಉಳಿಯೋದು ಖಚಿತವಾಗಿದೆ. ಈ ಮಧ್ಯೆ ಸಿಡಿ ಪ್ರಕರಣದಲ್ಲಿ ಪೊಲೀಸರು ಸಂತ್ರಸ್ಥೆಯನ್ನೇ ಮತ್ತೆ ಮತ್ತೆ ವಿಚಾರಣೆಗೆ ಕರೆಯುತ್ತಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ನಡೆಸಿದ್ದು, ಎಸ್ಐಟಿ ಹಾಗೂ ಸರಕಾರದ ವಿರುದ್ಧ ಟ್ವೀಟ್ ವಾರ್ ನಡೆಸಿದೆ.
ಈಗ ರಮೇಶ್ ಜಾರಕಿಹೊಳಿ ಕೊರೋನಾ ಸೋಂಕಿಗೆ ತುತ್ತಾಗಿರೋದರಿಂದ ಇನ್ನಷ್ಟು ದಿನಗಳ ಕಾಲ ವಿಚಾರಣೆಯಿಂದ ಬಚಾವ್ ಆಗೋ ಅವಕಾಶ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರಗೊಂಡಿದ್ದು, ಹಲವರು ಸೋಂಕಿಗೆ ತುತ್ತಾಗುತ್ತಿದ್ದಾರೆ.