ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಇರೋದಿಲ್ಲ : ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದ ಯತ್ನಾಳ್ !

ವಿಜಯಪುರ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಟ್ಟದಿಂದ ಕೆಳಗಿಸಲು ಹುನ್ನಾರ ನಡೆಯುತ್ತಿದ್ಯಾ ? ಹೌದು, ಎನ್ನುತ್ತಿದ್ದಾರೆ ಬಸವನಗೌಡ ಯತ್ನಾಳ್. ಬಿಜೆಪಿ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಆ ಒಂದು ಹೇಳಿಕೆ ಇದೀಗ ರಾಜ್ಯ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಒಂದು ಕಾಲದಲ್ಲಿ ಯಡಿಯೂರಪ್ಪ ಆಪ್ತ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಇದೀಗ ಸಿಡಿದೆದ್ದಿದ್ದಾರೆ. ಹಲವು ಸಮಯದಿಂದಲೂ ನಾಯಕತ್ವ ಬದಲಾವಣೆಯ ವಿಚಾರವನ್ನೂ ಪ್ರಸ್ತಾಪಿಸುತ್ತಲೇ ಬಂದಿದ್ದ ಯತ್ನಾಳ್ ಇದೀಗ ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ದ ಹೇಳಿಕೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಕೇಂದ್ರಕ್ಕೂ ಸಾಕಾಗಿದ್ದಾರೆ, ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿಯಾಗುತ್ತಾರೆ ಅನ್ನೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯತ್ನಾಳ್ ವಿಜಯಪುರಕ್ಕೆ ಬಂದಿದ್ದ 125 ಕೋಟಿ ರೂಪಾಯಿ ಅನುದಾನವನ್ನು ವಾಪಾಸ್ ಪಡೆದಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವೇಳೆಯಲ್ಲಿ ಯತ್ನಾಳ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸಿಎಂ ಯಡಿಯೂರಪ್ಪ ಅನುದಾನವನ್ನು ಬರೀ ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ. ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ.

ಅವರದೂ ಬಂದೈತಿ. ಏಕೆಂದ್ರೆ ಮೇಲಿನವರಿಗೂ ಅವರು ಸಾಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಉಮೇಶ ಕತ್ತಿ ಅವರು ಕೂಡ ಯಡಿಯೂರಪ್ಪ ಶಿವಮೊಗ್ಗ ಮುಖ್ಯಮಂತ್ರಿಯೋ ? ಕರ್ನಾಟಕದ ಮುಖ್ಯಮಂತ್ರಿಯೋ ಎಂದು ಹೇಳಿಕೆ ನೀಡಿದ್ದರು ಎಂದು ಯತ್ನಾಳ ತಮ್ಮ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದಾರೆ. ತನ್ನ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ವಾಪಾಸ್ ಪಡೆದಿದ್ದರೂ ನಾನು ಬಿಡುವುದಿಲ್ಲ. ಅನುದಾನವನ್ನು ಹೇಗೆ ತರಬೇಕೋ ತರ್ತೇನಿ. ಉತ್ತರ ಕರ್ನಾಟಕದ ಶಾಸಕರಿಂದಲೇ ಬಿಜೆಪಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕೋಲಾರ, ಚಾಮರಾಜನಗರ, ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಯಾರು ಓಟ್ ಹಾಕ್ತಾರಾ ಎಂದು ಪ್ರಶ್ನಿಸಿದ ಅವರು ಉತ್ತರ ಕರ್ನಾಟಕ ಭಾಗದಲ್ಲಿ 100 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಈ ವಿಚಾರ ಪ್ರಧಾನಿ ಅವರಿಗೂ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಉತ್ತರದವರೇ ಉತ್ತರಾಧಿಕಾರಿಯಾಗುತ್ತಾರೆ. ಈಗಾಗಲೇ ಬಹುತೇಕ ಫೈನಲ್ ಆಗಿದೆ ಎಂದಿದ್ದಾರೆ.

ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆಯ ಹೊತ್ತಲ್ಲೇ ಯತ್ನಾಳ್ ನೀಡಿರುವ ಹೇಳಿಕೆ ಇದೀಗ ವಿವಾದವನ್ನೇ ಹುಟ್ಟು ಹಾಕಿದೆ. ಮಾತ್ರವಲ್ಲ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಂದಾಯ ಸಚಿವ ಆರ್.ಅಶೋಕ್, ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೂಡ ಯತ್ನಾ ಹೇಳಿಕೆಯ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಜ್ಜಾಗಿರೋದು ಇದೀಗ ಯತ್ನಾಳ್ ಹೇಳಿಕೆಯಿಂದ ಸ್ಪಷ್ಟವಾದಂತಾಗಿದೆ.

Comments are closed.