ಬೆಂಗಳೂರು : ರಾಜ್ಯದಲ್ಲಿ 6 ರಿಂದ 8 ನೇ ತರಗತಿ ವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲಾರಂಭ ಕುರಿತು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಬೆಂಗಳೂರು ಹಾಗೂ ಕೇರಳ ಗಡಿಭಾಗದ ಪ್ರದೇಶಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಶಾಲೆಯನ್ನು ಆರಂಭಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿ ಹಾಗೂ ಕೇರಳ ಗಡಿಭಾಗದ ಶಾಲೆಗಳಲ್ಲಿ 8ನೇ ತರಗತಿಯನ್ನು ಆರಂಭಿಸುವುದರ ಜೊತೆಗೆ 6 ಮತ್ತು 7ನೇ ತರಗತಿಗಳಿಗೆ ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಕೇರಳ ಗಡಿಭಾಗ ಹಾಗೂ ಬಿಬಿಎಂಪಿ ವ್ಯಾಪ್ತಿಯನ್ನು ಹೊರತು ಪಡಿಸಿ, ಫೆಬ್ರವರಿ 22ರಂದ 6,7 ಮತ್ತು 8ನೇ ತರಗತಿಗಳನ್ನು ನಿತ್ಯವೂ ಪೂರ್ಣಾವಧಿಯಲ್ಲಿ ಪ್ರಾರಂಭಿಸಲಾಗುತ್ತದೆ.
ರಾಜ್ಯದಲ್ಲಿನ ಆಯ್ದ ಶಾಲೆ, ಹಾಸ್ಟೇಲ್ ಗಳಲ್ಲಿ ವಿದ್ಯಾರ್ಥಿ, ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ರಾಂಡಮ್ ಟೆಸ್ಟ್ ನಡೆಸಲು ಸೂಚನೆಯನ್ನು ನೀಡಲಾಗಿದ್ದು, ಕೇರಳ ರಾಜ್ಯದಿಂದ ಬರುವ ಮಕ್ಕಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


