ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯ ಆಕ್ಸಫರ್ಡ್ ನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕನ್ನಡತಿ, ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿಸಾಮಂತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳ ಮನಗೆದ್ದು ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ‘

ರಶ್ಮಿ ಸಾಮಂತ್ ಈ ಸಾಧನೆಗೈಯ್ಯುವ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎನ್ನಿಸಿದ್ದಾರೆ. ಉಡುಪಿಯ ಮಣಿಪಾಲದ ವತ್ಸಲಾ ಹಾಗೂ ದಿನೇಶ್ ಸಾಮಂತ್ ದಂಪತಿಯ ಪುತ್ರಿ ರಶ್ಮಿ ಸಾಮಂತ್ ತಮ್ಮ ಶಿಕ್ಷಣವನ್ನು ಉಡುಪಿಯಲ್ಲಿ ಆರಂಭಿಸಿದ್ದು, ಎಂಐಟಿಯಲ್ಲಿ 2016 ರಿಂದ 2020 ರವರೆಗೆ ಮೆಕಾನಿಕಲ್ ಇಂಜನೀಯರಿಂಗ್ ಓದಿದ್ದರು.

ಬಳಿಕ ಹೆಚ್ಚಿನ ಶಿಕ್ಷಣಕ್ಕಾಗಿ ಅಕ್ಸಫರ್ಡ್ ವಿವಿಗೆ ದಾಖಲಾಗಿದ್ದ ರಶ್ಮಿ, ಏನರ್ಜಿ ವಿಷಯದಲ್ಲಿ ಎಂಎಸ್ಸಿ ಓದುತ್ತಿದ್ದಾರೆ. ಆಕ್ಸಫರ್ಡ್ ವಿವಿಯ ಕ್ಯಾಂಪಸ್ ನಲ್ಲಿ ಕೊರೋನಾ ಮುಕ್ತ ಸುರಕ್ಷಿತ ವಾತಾವರಣ ನಿರ್ಮಾಣ ಹಾಗೂ ಮಾನಸಿಕ ಆರೋಗ್ಯದ ಪರಿಸರ ಸ್ನೇಹಿ ಕಾಲೇಜ್ ಕ್ಯಾಂಪಸ್ ನಿರ್ಮಾಣದ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳ ಮನಗೆದ್ದು ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ.

ಚುನಾವಣೆಯಲ್ಲಿ ಪಡೆದ ಮತಗಳ ಆಧಾರದ ಮೇಲೆ ರಶ್ಮಿ ವಿದ್ಯಾರ್ಥೀ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಒಟ್ಟು 3708 ಮತಗಳಲ್ಲಿ ರಶ್ಮಿ 1966 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ರಶ್ಮಿ ಸೇರಿದಂತೆ ಒಟ್ಟು ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದು, ಉಳಿದ ಮೂವರು ಅಭ್ಯರ್ಥಿಗಳು ಪಡೆದ ಒಟ್ಟು ಮತಕ್ಕಿಂತ ಹೆಚ್ಚು ಮತವನ್ನು ರಶ್ಮಿ ಪಡೆದಿದ್ದಾರೆ.

ಇತ್ತೀಚಿಗೆ ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು, ಭಾರತೀಯ ಅಭ್ಯರ್ಥಿಗಳು ಅತ್ಯುನ್ನತ ಹುದ್ದೆ, ರಾಜಕೀಯ ಪಟ್ಟ, ವಿದ್ಯಾರ್ಥಿ ಸಂಘದ ಚುನಾವಣೆ ಗೆಲುವು ಹಲವು ಸಾಧನೆಯಲ್ಲಿ ನಿರತರಾಗಿದ್ದು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.