ಬೆಂಗಳೂರು: ದಸರಾ,ದೀಪಾವಳಿ ದಾಟಿ ಬಂದ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಈಗ ಸಂಕ್ರಾಂತಿಗೂ ಮುಂದುವರೆದಿದ್ದು ಇನ್ನೆರಡೇ ದಿನದಲ್ಲಿ ಸಚಿವರಾಗೋದಾಗಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳ್ಳಂಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂಬಿಎಸ್ವೈ ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ , ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ನಾನು ಇನ್ನೆರಡು ದಿನದಲ್ಲಿ ಮಿನಿಸ್ಟರ್ ಆಗ್ತೇನೆ ಎಂದ್ರು.

ಸಿಎಂ ಭೇಟಿ ವೇಳೆ ಸ್ವತಃ ಬಿಎಸ್ವೈ ನಾನು ಕೇಳದೇ ಇದ್ದರೂ ನೀನು ಇನ್ನೆರಡು ದಿನದಲ್ಲಿ ಮಂತ್ರಿ ಆಗ್ತಿಯಪ್ಪಾ ಎಂದಿದ್ದಾರೆ. ಹೀಗಾಗಿ ನಾನು ಇಂದು ಸಂಜೇ ಅಥವಾ ನಾಳೆ ನಾಡಿದ್ದಿನೊಳಗೆ ಮಿನಿಸ್ಟರ್ ಆಗೋದು ಪಕ್ಕಾ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ ಹಿರಿಯ ಶಾಸಕ ಉಮೇಶ್ ಕತ್ತಿಯವರಿಗೂ ಸಿಎಂ ಇದೇ ವಿಶ್ವಾಸ ನೀಡಿದ್ದಾರೆ ಎಂಬ ಮಾಹಿತಿಯನ್ನು ಆರ್.ಶಂಕರ್ ಹಂಚಿಕೊಂಡಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಸಂಕ್ರಾಂತಿ ಮುಹೂರ್ತ ಕ್ಕೆ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮುಂದುವರೆಯುವ ಸಾಧ್ಯತೆ ಇದ್ದು, ಮತ್ತೆ ಸಚಿವ ಸ್ಥಾನಾಕಾಂಕ್ಷಿಗಳ ಪೆರೇಡ್ ಸಿಎಂ ನಿವಾಸದತ್ತ ನಡೆದಿದೆ.

ಮೂಲಗಳ ಪ್ರಕಾರ ಸಂಕ್ರಾಂತಿ ವೇಳೆಗೆ ಕನಿಷ್ಠ ೪-೬ ಜನರಿಗೆ ಸಚಿವ ಸ್ಥಾನ ನೀಡಲು ಹಾಗೂ ಇಬ್ಬರೂ ಸಚಿವರಿಗೆ ಖೋಕ್ ನೀಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆ ಹುಲಿ ಬಂತು ಹುಲಿ ಎಂಬ ಕತೆಯಂತಾಗಿದ್ದು ಹೀಗಾಗಿ ಸಚಿವ ಸ್ಥಾನದ ಪಟ್ಟಿ ಘೋಷಣೆಯಾಗಿ ಪ್ರಮಾಣವಚನ ಸ್ವೀಕಾರದ ಮುಹೂರ್ತ ಫಿಕ್ಸ್ ಆದರಷ್ಟೇ ನಂಬಬೇಕು ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿಬಂದಿದೆ.

ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಕೈಇಡುವ ಕೆಲಸಕ್ಕೆ ಸಿದ್ಧವಿಲ್ಲದೇ, ಬೀಸೋ ದೊಣ್ಣೆತಪ್ಪಿಸಿಕೊಳ್ಳಲು ಒಂದೊಂದೆ ಹಬ್ಬದ ಮುಹೂರ್ತ ನೀಡುತ್ತ ಸಾಗುತ್ತಿದ್ದು ಈಗ ಸಂಕ್ರಾಂತಿಗೆ ವಿಸ್ತರಣೆ ಸಿಹಿ ನೀಡೋ ಭರವಸೆ ನೀಡ್ತಿದೆ ಎಂಬ ಮಾತು ಕೇಳಿ ಬಂದಿದೆ.
ಒಟ್ಟಿನಲ್ಲಿ ಬಿಜೆಪಿಯ ಶಾಸಕರ ಸಚಿವರಾಗೋ ಕನಸು,ಸಂಪುಟ ವಿಸ್ತರಣೆ ಸದಾ ಸುದ್ದಿಯ ಸರಕುಗಳಾಗ್ತಿದ್ದು ಜನರು ಇದೆಂತಾ ರಾಜಕೀಯ ಅಂತ ಮೂಗು ಮುರಿತಿದ್ದಾರೆ.