ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಉಪಚುನಾವಣೆಯಲ್ಲೂ ಸೋಲು ಕಂಡ ಕೈಪಾಳಯ ಸೋಲಿನ ವಿಮರ್ಶೆಗೆ ಮುಂದಾಗಿದ್ದು, ಇದರೊಂದಿಗೆ ಮುಂಬರುವ ಚುನಾವಣೆಗಳ ಗೆಲುವಿಗಾಗಿ ರಣತಂತ್ರ ರೂಪಿಸಲು ಮುಂದಾಗಿದೆ.

ನವೆಂಬರ್ 30 ಸೋಮವಾರ ಬೆಂಗಳೂರು ಹೊರವಲಯದ ಸಾದಹಳ್ಳಿ ಗೇಟ್ ಬಳಿ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಐಸಿಸಿ ಪ್ರತಿನಿಧಿಯಾಗಿ ಮಹಾರಾಷ್ಟ್ರ ಸಚಿವೆ ಯಶೋಮತಿ ಠಾಕೂರ್ ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಇತ್ತೀಚಿಗೆ ನಡೆದ ಶಿರಾ ಹಾಗೂ ಆರ್‌ಆರ್ ನಗರ ಚುನಾವಣೆ ಸೋಲಿನ ಕಾರಣಗಳ ಕುರಿತು ಚರ್ಚೆ ನಡೆಯಲಿದ್ದು, ಕಾಂಗ್ರೆಸ್ ಎಡವಿದ್ದೆಲ್ಲಿ ಎಂಬ ಚರ್ಚೆ ನಡೆಯುವ ಸಾಧ್ಯತೆ ಇದೆ.

ಅಲ್ಲದೇ ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಗ್ರಾಮ ಪಂಚಾಯತಿ ಚುನಾವಣೆಯ ಕುರಿತು ಕಾರ್ಯತಂತ್ರ ರಚಿಸುವ ಕುರಿತು ಕೂಡ ಚರ್ಚೆ ನಡೆಯಲಿದೆ.

ಸಭೆಯಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.

ಮೂಲಗಳ ಪ್ರಕಾರ ಮುಂದಿನ ಕಾಂಗ್ರೆಸ್ ಸಿಎಂ ಕ್ಯಾಂಡಿಡೇಟ್ ಕುರಿತು ಮನಬಂದಂತೆ ಹೇಳಿಕೆ ನೀಡಿ ಆಂತರಿಕಕಚ್ಚಾಟದ ಸಾಕ್ಷಿ ನೀಡಿದ ಶಾಸಕರುಗಳ ಬಗ್ಗೆಯೂ ಹೈಕಮಾಂಡ್ ರಾಜ್ಯ ನಾಯಕರಿಂದ ಸ್ಪಷ್ಟನೆ ಕೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.