ಶಾಸಕ ಮತ್ತು ಡಿಕೆಶಿ ನಡುವೆ ಮುಂದುವರಿದ ಕೋಲ್ಡ್ ವಾರ್…! ಭೇಟಿಗೆ ನೆಪವೊಡ್ಡಿ ನಿರಾಕರಿಸಿದ ಕೆಪಿಸಿಸಿ ಅಧ್ಯಕ್ಷರು..!!

ಬೆಂಗಳೂರು: ಕಾಂಗ್ರೆಸ್ ನಲ್ಲಿ ದಲಿತ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಅಂತ ಬಿಜೆಪಿ ಟೀಕಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರು ಈ ಮಾತನ್ನು ನಿಜವಾಗಿಸಲು ಹೊರಟಂತಿದ್ದು, ನೊಂದ ಕೈ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭೇಟಿಗೆ ಡಿಕೆಶಿ ನಿರಾಕರಿಸಿದ್ದಾರೆ.

ಸಿಸಿಬಿ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್  ಸಂಪತ್ ರಾಜ್  ರನ್ನು ಸೋಮವಾರ ತಡರಾತ್ರಿ ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಈಗಲಾದರೂ ಕೆಪಿಸಿಸಿ ಅಧ್ಯಕ್ಷರು ನನ್ನ ಪರ ನಿಲ್ಲಬೇಕು ಎಂದಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಖಂಡ ಶ್ರೀನಿವಾಸಮೂರ್ತಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆದರೆ ಅವರು ನನ್ನ ಜೊತೆ ಮಾತನಾಡಲಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀನಿವಾಸಮೂರ್ತಿ ಬುಧವಾರ ಮುಂಜಾನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಗೆ ತೆರಳಿದ್ದರು.

ಆದರೆ ಅಖಂಡ ಶ್ರೀನಿವಾಸಮೂರ್ತಿಯನ್ನು ಘಟನೆಯ ಆರಂಭದಿಂದಲೂ ದೂರ ಇಡುತ್ತಲೇ ಬಂದಿರುವ ಡಿ.ಕೆ.ಶಿವಕುಮಾರ್ ಮಗಳ ನಿಶ್ಚಿತಾರ್ಥದ ನೆಪವೊಡ್ಡಿ  ಭೇಟಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ನವೆಂಬರ್ 21 ರಂದು ತಮ್ಮ ಭೇಟಿಗೆ ಆಗಮಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದು ಡಿ.ಕೆ.ಶಿವಕುಮಾರ್ ಅಖಂಡ ಶ್ರೀನಿವಾಸಮೂರ್ತಿಗೆ ತೋರುತ್ತಿರುವ ಅಸಡ್ಡೆ ಎಂದು ಬಿಂಬಿತವಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷರ  ಈ ಧೋರಣೆಯಿಂದ ನೊಂದ ಶ್ರೀನಿವಾಸಮೂರ್ತಿ ನಾಳೆ ಸಿದ್ಧರಾಮಯ್ಯ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಆರೋಪಿ ಸ್ಥಾನದಲ್ಲಿರೋ ಮಾಜಿ ಮೇಯರ್ ಸಂಪತ್ ರಾಜ್ ಗೆ ಸಿಕ್ಕಷ್ಟು ಪ್ರಾಮುಖ್ಯತೆ ಹಾಗೂ ಬೆಂಬಲ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಸಿಗುತ್ತಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

Comments are closed.