ಬೆಂಗಳೂರು: ಈಗಾಗಲೇ ಹಲವಾರು ಭಾರಿ ಎಡವಟ್ಟು ನಿರ್ಧಾರಕೈಗೊಂಡು ಪೋಷಕರ ಆಕ್ರೋಶಕ್ಕೆ ಕಾರಣವಾಗಿರುವ ಶಿಕ್ಷಣ ಇಲಾಖೆ ಮತ್ತೊಮ್ಮೆ ಪೋಷಕರು, ವಿದ್ಯಾರ್ಥಿಗಳ ಆಕ್ರೋಶಕ್ಕೆ ತುತ್ತಾಗಿದೆ. ಮೊನ್ನೆ ಮೊನ್ನೆ ಪ್ರಥಮ ಪಿಯುಸಿಗೆ ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳು ಪಾಸ್ ಎಂದಿದ್ದ ಇಲಾಖೆ ಈಗ ಆನ್ ಲೈನ್ ಎಕ್ಸಾಂ ನಡೆಸುವುದಾಗಿ ಘೋಷಿಸಿದೆ.

ರಾಜ್ಯದ ಎಲ್ಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸುವುದಾಗಿ ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿದೆ. ಈಗಾಗಲೇ ಇಲಾಖೆಯು ರಾಜ್ಯದ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದು, ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಎರಡು ವಿಷಯಕ್ಕೆ ಪರೀಕ್ಷೆ ನಡೆಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪರೀಕ್ಷೆಗಾಗಿ ಎರಡು ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಪಿಯು ಬೋರ್ಡ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಈ ಪ್ರಶ್ನೆ ಪತ್ರಿಕೆ ಡೌನ್ ಲೋಡ್ ಮಾಡಿಕೊಂಡು ಉತ್ತರ ಬರೆದು ಉತ್ತರ ಪತ್ರಿಕೆಯನ್ನು ವಾಟ್ಸಾಪ್, ಈಮೇಲ್ ಹಾಗೂ ಅಂಚೆ ಮೂಲಕ ಉಪನ್ಯಾಸಕರಿಗೆ ಕಳುಹಿಸಬೇಕು.

ಹೀಗೆ ವಿದ್ಯಾರ್ಥಿಗಳು ಕಳುಹಿಸಿದ ಉತ್ತರ ಪತ್ರಿಕೆಯನ್ನು ಉಪನ್ಯಾಸಕರು ಮೌಲ್ಯಮಾಪನ ಮಾಡಿ ಅಂಕವನ್ನು ಸ್ಟುಡೆಂಟ್ ಆಚಿವಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ನಲ್ಲಿ ಫಲಿತಾಂಶವನ್ನು ಅಪ್ಲೋಡ ಮಾಡಲು ಆದೇಶಿಸಲಾಗಿದೆ.

ಅಸೆಸ್ಮೆಂಟ್ ರೀತಿಯಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಮೊದಲ ಅಸೆಸ್ಮೆಂಟ್ ಗೆ ಜೂನ್ 20 ಕೊನೆಯ ದಿನಾಂಕವಾಗಿದ್ದು, ಉಪನ್ಯಾಸಕರು ಜೂನ್ 25 ರ ಒ ಳಗೆ ಮೌಲ್ಯ ಮಾಪನ ಮಾಡಿ ಫಲಿತಾಂಶ ಭರ್ತಿ ಮಾಡಬೇಕು.

ಎರಡನೇ ಅಸೆಸ್ಮೆಂಟ್ ಗೆ ಜೂನ್ 26 ಕೊನೆಯ ದಿನಾಂಕವಾಗಿದ್ದು, ಜುಲೈ 5 ರೊಳಗೆ ಫಲಿತಾಂಶ ನೀಡಲು ಉಪನ್ಯಾಸಕರಿಗೆ ಸೂಚಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಕೈಬಿಟ್ಟಿರುವ ಸರ್ಕಾರ ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸಲು ಮುಂಧಾಗಿದೆ.

ಕ್ಷಣಕ್ಕೊಂದು ನಿರ್ಧಾರ ಪ್ರಕಟಿಸುತ್ತಿರುವ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಪೋಷಕರು ಹಾಗೂ ವಿದ್ಯಾರ್ಥಿಗಳು ಅಸಮಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.