ಜ್ಯೂನಿಯರ್ ಚಿರು ನಾಮಕರಣಕ್ಕೆ ಸಿದ್ಧತೆ….! ಚಿಂಟೂಗೆ ಹೆಸರು ಫೈನಲ್ ಮಾಡಿದ್ರಾ ಮೇಘನಾರಾಜ್…!!

ಸ್ಯಾಂಡಲ್ ವುಡ್ ನ  ತಾರಾ ದಂಪತಿ ಚಿರು ಹಾಗೂ ಮೇಘನಾ ರಾಜ್ ಮುದ್ದಿನ ಮಗ ಜ್ಯೂನಿಯರ್ ಚಿರು ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್. ಸದಾ ಮುದ್ದು ಮಗನ ಒಂದಿಲ್ಲೊಂದು ವಿಡಿಯೋ ಹಂಚಿಕೊಳ್ಳೋ ಮೇಘನಾ ರಾಜ್ ಕೊನೆಗೂ ಮಗನ ನಾಮಕರಣಕ್ಕೆ ಸಿದ್ಧವಾಗಿದ್ದು, ಹೆಸರು ಫೈನಲ್ ಮಾಡಿದ್ದಾರಂತೆ.

ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಬಲಿಯಾದಾಗ ನಟಿ ಮೇಘನಾ ರಾಜ್ ಐದು ತಿಂಗಳ ಗರ್ಭಿಣಿ. ತಂದೆಯನ್ನು ಕಳೆದುಕೊಂಡ ದುಃಖದ ಅರಿವಿಲ್ಲದೇ ಭುವಿಗೆ ಬಂದ ಪುಟ್ಟ ಗಂಡುಮಗುವಿಗೆ ಹುಟ್ಟಿದ ಕೂಡಲೇ ಎಲ್ಲರೂ ಜ್ಯೂನಿಯರ್ ಚಿರು ಎಂದೇ ನಾಮಕರಣ ಮಾಡಿದ್ದರು.

ಅಂದಿನಿಂದ ಜ್ಯೂನಿಯರ್ ಚಿರು ಎನ್ನುತ್ತಲೇ ಪ್ರಸಿದ್ಧಿ ಪಡೆದ ಮೇಘನಾ ಪುತ್ರನಿಗೆ, ನಟ ಹಾಗೂ ಚಿರು ಸೋದರ ಮಾವ ಅರ್ಜುನ್ ಸರ್ಜಾ ಸಿಂಬಾ ಎಂದು ಪ್ರೀತಿಯಿಂದ ಕರೆದಿದ್ದರು. ಇನ್ನೊಂದೆಡೆ ಚಿಕ್ಕಪ್ಪ ಧ್ರುವ್ ಸರ್ಜಾ ಪುಟಾಣಿಗೆ ಜ್ಯೂನಿಯರ್ ಎಂದೇ ಕರೆಯುತ್ತಾರಂತೆ.

ಇನ್ನು ಹೆರಿಗೆ ನಂತರ ತಾಯಿಮನೆಯಲ್ಲೇ ಇರುವ ಮೇಘನಾ ರಾಜ್  ಮಗನೊಂದಿಗೆ ತಂದೆ-ತಾಯಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಮುದ್ದಾದ ಮೊಮ್ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಳ್ಳೋ ಅಜ್ಜ ಸುಂದರ ರಾಜ್ ಮೊಮ್ಮಗನಿಗೆ ಚಿಂಟು ಎಂದು ನಾಮಕರಣ ಮಾಡಿದ್ದಾರಂತೆ.

ಆದರೆ ಇದುವರೆಗೂ ಜ್ಯೂನಿಯರ್ ಚಿರುಗೆ ಅಧಿಕೃತವಾದ ಹೆಸರಿನ ಆಯ್ಕೆ ಆಗಿಲ್ಲ. ಮೊನ್ನೆ ಮೊನ್ನೆಯಷ್ಟೇ ಮಾಧ್ಯಮವೊಂದರಲ್ಲಿ ಮಾತನಾಡಿದ ಮೇಘನಾ ಇನ್ನು ಮಗನ ಹೆಸರು ಫೈನಲ್ ಮಾಡಿಲ್ಲ. ನಾಮಕರಣದ ವೇಳೆಗೆ ಫೈನಲ್ ಮಾಡಿ ಹೇಳುತ್ತೇನೆ ಎಂದಿದ್ದರು.

ಮೂಲಗಳ ಮಾಹಿತಿ ಪ್ರಕಾರ ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಜ್ಯೂನಿಯರ್ ಚಿರುಗೆ ನಾಮಕರಣ ನಡೆಯಲಿದೆ ಎನ್ನಲಾಗುತ್ತಿದೆ. ಆಗಾಗ ಮೇಘನಾ ರಾಜ್ ತಮ್ಮ ಮುದ್ದು ಮಗುವಿನ ಪೋಟೋ,ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳು ಜ್ಯೂನಿಯರ್ ನಾಮಕರಣ ನೋಡೋದಿಕ್ಕೆ ಹಾಗೂ ಹೆಸರು ತಿಳಿದುಕೊಳ್ಳೋದಿಕ್ಕೆ ಕಾತುರರಾಗಿ ಕಾಯ್ತಿದ್ದಾರೆ.

Comments are closed.