ದೇಶದಲ್ಲಿ ಯಾವುದೇ ಮಹತ್ವದ ಅಥವಾ ಚರ್ಚೆಗೊಳಗಾಗುವಂತ ಘಟನೆಗಳು ನಡೆದಾದ ಅದು ಸಿನಿಮಾ ರೂಪದಲ್ಲಿ ತೆರೆಗೆ ಬರೋದು ಸಹಜ. ನಿರ್ಭಯಾ ಕೇಸ್ ಸೇರಿದಂತೆ ಹಲವು ಪ್ರಕರಣಗಳು ಇದಕ್ಕೆ ಸಾಕ್ಷಿ. ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಕೂಡ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದ್ದು, ಸಿಡಿ ಲೇಡಿ ಎಂಬ ಟೈಟಲ್ ಈಗಾಗಲೇ ನೋಂದಣಿಗೆಯಾಗಿದೆ.

ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣದ ಹಿಂದೆ ಬಿದ್ದಿರೋ ಎಸ್ ಐ ಟಿ ಇನ್ನು ಆರೋಪಿಗಳ ಬಂಧನಕ್ಕೆ ಸರ್ಕಸ್ ನಡೆಸಿರುವಾಗಲೇ ಸಿನಿಮಾ ರಂಗದಲ್ಲಿ ಸಿಡಿ ಪ್ರಕರಣದ ಸಿನಿಮಾಗೆ ಟೈಟಲ್ ಫೈಟ್ ಶುರುವಾಗಿದೆ. ತಾಮುಂದು ನಾಮುಂದು ಅಂತ ನಿರ್ಮಾಪಕರು ಟೈಟಲ್ ಹಿಂದೆ ಬಿದ್ದಿದ್ದಾರೆ.

ಈಗಾಗಲೇ ಹಿರಿಯ ನಿರ್ಮಾಪಕ ಎಂಎಲ್ಸಿ ಸಂದೇಶ ನಾಗರಾಜ್ ಸಿಡಿ ಲೇಡಿ ಹೆಸರಿನಲ್ಲಿ ಫಿಲಂ ಚೇಂಬರ್ ನಲ್ಲಿ ಟೈಟಲ್ ನೋಂದಣಿ ಮಾಡಿಸಿದ್ದಾರಂತೆ. ಈ ಬಗ್ಗೆ ಮಾಹಿತಿ ನೀಡಿರುವ ಸಂದೇಶ್ ನಾಗರಾಜ್ ರಾಜ್ಯದ ಬೆಳವಣಿಗೆಯನ್ನು ಗಮನಿಸಿ ಸಿಡಿ ಲೇಡಿ ಟೈಟಲ್ ನೋಂದಣಿ ಮಾಡಿಸಿದ್ದೇನೆ. ಆದರೆ ಇನ್ನೂ ಕಥೆ,ಚಿತ್ರಕಥೆ ಸಿದ್ಧವಾಗಿಲ್ಲ. ಸಿನಿಮಾ ಯಾವಾಗ ಸೆಟ್ಟೇರುತ್ತೆ ಅನ್ನೋದು ಈಗ ಹೇಳೋಕ್ಕಾಗೋದಿಲ್ಲ ಎಂದಿದ್ದಾರೆ.

ನಾನು ಕಾದಂಬರಿ ಆಧಾರಿತ ಚಿತ್ರಗಳನ್ನು ಜನರಿಗೆ ಕೊಟ್ಟವನು. ಹೀಗಾಗಿ ಸಿಡಿಲೇಡಿ ಹೆಸರಿನಲ್ಲಿ ಸಿನಿಮಾ ಮಾಡಿದರೂ ಅಶ್ಲೀಲ ಸಂಗತಿಗಳನ್ನು ತೋರಿಸುವುದಿಲ್ಲ. ಆದರೆ ಸಿನಿಮಾ ಇಂಟ್ರಸ್ಟಿಂಗ್ ಆಗಿ ಬರಲಿದೆ. ಅದಕ್ಕಾಗಿ ಮೊದಲೇ ಟೈಟಲ್ ನೋಂದಣಿ ಮಾಡಿಸಿದ್ದೇನೆ ಎಂದಿದ್ದಾರೆ.