ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಆರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ಶಾಲೆ, ಕಾಲೇಜಗಳನ್ನು ಆರಂಭಿಸಬೇಕೆಂಬ ಒತ್ತಡ ಕೇಳಿಬಂದಿತ್ತು. ಅಲ್ಲದೇ ಕೋವಿಡ್ ತಾಂತ್ರಿಕ ಸಮಿತಿ ಕೂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯಬಹುದೆಂದು ಹೇಳಿತ್ತು. ಈ ಹಿನ್ನೆಲೆಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ಸಿಎಂ ಯಡಿಯೂರಪ್ಪ ಶಾಲೆ, ಕಾಲೇಜು ಆರಂಭಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಇನ್ನು ಜನವರಿ 1ರಿಂದಲೇ ವಿದ್ಯಾಗಮ ಯೋಜನೆಯನ್ನು ಪರಿಷ್ಕೃತವಾಗಿ ಪುನರಾರಂಭಿಸಲಾಗುತ್ತಿದೆ. 6 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನಗಳ ಕಾಲ ಶಾಲಾ ಆವರಣದಲ್ಲಿಯೇ ನಡೆಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪತ್ರವನ್ನು ತರಬೇಕು. ಅಲ್ಲದೇ ಪೋಷಕರು ತಮ್ಮ ಮಕ್ಕಳಿಗೆ ಜ್ವರ, ಶೀತ, ನೆಗಡಿ ಇಲ್ಲಾ ಅನ್ನುವ ಕುರಿತು ಪತ್ರವನ್ನು ನೀಡಬೇಕು. ವಿದ್ಯಾಗಮ ಯೋಜನೆಗೆ ಬಳಕೆ ಮಾಡುವ ಕೊಠಡಿಗಳನ್ನು ಕಡ್ಡಾಯವಾಗಿ ನಿತ್ಯವೂ ಸ್ಯಾನಿಟೈಸ್ ಮಾಡಬೇಕು.
ರಾಜ್ಯದಾದ್ಯಂತ ಶಾಲಾರಂಭವಾಗುತ್ತಿದ್ದರೂ ಕೂಡ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂಬ ನಿಯಮವಿಲ್ಲ. ಪೋಷಕರು ಕೂಡ ಕಳುಹಿಸಲೇ ಬೇಕೆಂದಿಲ್ಲ.