ಕೊರೋನಾದಿಂದ ಸಾಮಾನ್ಯ ಜನರು ಜೀವನ ಸಂಕಷ್ಟಕ್ಕೆ ಸಿಲುಕಿರೋದು ಈಗ ಹಳೆಯ ವಿಚಾರ. ಆದರೆ ಸರ್ಕಾರವೂ ಸಾಲ ಮಾಡೋ ಸ್ಥಿತಿಯಲ್ಲಿದೆ ಅಂದ್ರೇ ನಂಬಲೇಬೇಕು. ಹೌದು ಸರ್ಕಾರ ಸಾರಿಗೆ ಇಲಾಖೆ ಖರ್ಚು ವೆಚ್ಚ ನಿರ್ವಹಿಸಲು ಶಾಂತಿನಗರ ಬಸ್ ನಿಲ್ದಾಣವನ್ನೇ ಅಡ ಇಟ್ಟಿದ್ದು, ಪ್ರತಿತಿಂಗಳು ಬರೋಬ್ಬರಿ 1.04 ಕೋಟಿ ಬಡ್ಡಿ ಕಟ್ಟುತ್ತಿದೆ.


ಸಾರಿಗೆ ನೌಕರರ ಸಂಬಳ, ಪಿಎಫ್,ಇಎಸ್ಐ ಸೇರಿದಂತೆ ವಿವಿಧ ಕಾರಣಕ್ಕಾಗಿ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಬೇಕಾಗಿರುವ ಸಾರಿಗೆ ಇಲಾಖೆ ಆದಾಯದ ಕೊರತೆ ಎದುರಿಸುತ್ತಿದೆ. ಹೀಗಾಗಿ ಶಾಂತಿ ನಗರ ಬಸ್ ನಿಲ್ದಾಣವನ್ನು ಕೆನರಾ ಬ್ಯಾಂಕ್ ಗೆ ಅಡ ಇಟ್ಟಿದ್ದು, 160 ಕೋಟಿ ಸಾಲ ಪಡೆದುಕೊಂಡಿದೆ. ಇದಕ್ಕೆ ಪ್ರತಿ ತಿಂಗಳು 1.04 ಕೋಟಿ ಬಡ್ಡಿ ಕಟ್ಟುತ್ತಿದೆ.

ಆನಂದ ಎಂಬುವವರು ಮಾಹಿತಿ ಹಕ್ಕಿ ಕಾಯ್ದೆ ಅಡಿಯಲ್ಲಿ ಪಡೆದುಕೊಂಡ ಮಾಹಿತಿಯಲ್ಲಿ ಈ ಸಂಗತಿ ಬಯಲಾಗಿದೆ. 2019 ರ ಅಕ್ಟೋಬರ್ ನಿಂದ 2021 ರ ಜನವರಿ ವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ? ಅದಕ್ಕೆ ಎಷ್ಟು ಬಡ್ಡಿ ಕಟ್ಟುತ್ತಿದೆ.? ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿ ಯಾವುದು ಎಂಬ ಮಾಹಿತಿ ಕೋರಿ ಆನಂದ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಸಾರಿಗೆ ಇಲಾಖೆಯ ಅಕೌಂಟ್ಸ್ ಸೆಕ್ಷನ್ ನಿಂದ ಮಾಹಿತಿ ನೀಡಲಾಗಿದ್ದು, ಈ ಅವಧಿಯಲ್ಲಿ ಒಟ್ಟು 160 ಕೋಟಿ ಸಾಲವನ್ನು ಕೆನರಾ ಬ್ಯಾಂಕ್ ನಿಂದ ಪಡೆಯಲಾಗಿದೆ. ಇದಕ್ಕಾಗಿ ಶಾಂತಿನಗರ ಬಸ್ ನಿಲ್ದಾಣವನ್ನು ಅಡಮಾನ ಇಡಲಾಗಿದ್ದು, ಬಡ್ಡಿಯಾಗಿ ಮಾಸಿಕ 1.04 ಕೋಟಿ ರೂಪಾಯಿ ಪಾವತಿಸುವ ವಿಚಾರದ ಮಾಹಿತಿಹೊರಬಿದ್ದಿದೆ.

ಸಾಲದ ಸುಳಿಯಲ್ಲಿದ್ದ ಸಾರಿಗೆ ಇಲಾಖೆ 2019 ರಲ್ಲಿ 160 ಕೋಟಿ ಸಾಲಕ್ಕಾಗಿ ಪರದಾಡಿತ್ತು. ಆದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನೀಡದ ಹಿನ್ನೆಲೆಯಲ್ಲಿ ಶಾಂತಿನಗರ ಬಸ್ ನಿಲ್ದಾಣವನ್ನು ಅಡ ಇಟ್ಟು ಕೆನರಾ ಬ್ಯಾಂಕ್ ನಿಂದ ಸಾಲ ಪಡೆಯಲಾಗಿದೆ. ಒಟ್ಟಿನಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಸಂಗತಿ ಬೆಳಕಿಗೆ ಬಂದಿದ್ದು, ಇನ್ನಾದರೂ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.