ಕೇರಳ : ವಧು-ವರರು ತಮ್ಮ ಮದುವೆ ಅದ್ದೂರಿಯಾಗಿ ಎಲ್ಲೆಲ್ಲೋ ನಡೆಯಬೇಕು ಅಂತ ಕನಸು ಕಂಡಿರುತ್ತಾರೆ. ಆದರೆ ಕನಸುಗಳು ನನಸಾಗೋದಿಲ್ಲ. ಇಲ್ಲೊಂದು ಜೋಡಿಯ ಕತೆಯೂ ಹೀಗೆ. ಅದ್ದೂರಿಯಾಗಿ ಮದುವೆಯಾಗೋಕೆ ಸಿದ್ಧತೆ ನಡೆಸಿದ್ದ ವರ ಕೊನೆ ಕ್ಷಣದಲ್ಲಿ ವಧುವಿಗೆ ಆಸ್ಪತ್ರೆ ಬೆಡ್ ಮೇಲೆ ಮಲಗಿ ತಾಳಿಕಟ್ಟುವ ಮೂಲಕ ಸುದ್ದಿಯಾಗಿದ್ದಾನೆ.


ಕೇರಳದ ವೆಂಬಾಯಮ್ ನಲ್ಲಿ ಇಂತಹದೊಂದು ವಿಲಕ್ಷಣ ಘಟನೆ ನಡೆದಿದೆ. ವೆಂಬಾಯಮ್ ನಿವಾಸಿ ಮನೋಜ್ ಹಾಗೂ ರೇವತಿ ವಿವಾಹ ಫೆ.4 ರಂದು ನಿಶ್ಚಯವಾಗಿತ್ತು. ಅದ್ದೂರಿಯಾಗಿ ಮದುವೆಯಾಗೋ ಕನಸು ಕಂಡಿದ್ದ ಮನೋಜ್ ಮದುವೆಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ.

ಆದರೆ ಮದುವೆಗೂ ಎರಡು ದಿನ ಮೊದಲು ಮನೋಜ್ ಆರೋಗ್ಯ ಹದಗೆಟ್ಟು ತುರ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ ಅದ್ದೂರಿ ಮದುವೆ ಇರಲಿ, ಮದುವೆಯ ಮಂಟಪದಲ್ಲಿ ವಧುವಿಗೆ ತಾಳಿ ಕಟ್ಟೋದು ಸಾಧ್ಯವಾಗಲಿಲ್ಲ. ಹೀಗಾಗಿ ಎರಡು ಕುಟುಂಬದ ಸದಸ್ಯರು ನೊಂದು ಕೊಂಡಿದ್ದಾರೆ.
ಆದರೆ ಮದುವೆಗಾಗಿ ನಡೆಸಿದ್ದ ಸಿದ್ಧತೆಗಳು ವ್ಯರ್ಥವಾಗಬಾರದು ಅನ್ನೋ ಕಾರಣಕ್ಕೆ ಎರಡು ಕುಟುಂಬದವರು ಚರ್ಚಿಸಿ ವೈದ್ಯರ ಅನುಮತಿ ಪಡೆದು ವರ ಮನೋಜ್ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯಲ್ಲೇ ಮನೋಜ್ ಮತ್ತು ರೇವತಿ ವಿವಾಹ ನೆರವೇರಿಸಿದ್ದಾರೆ. ಮನೋಜ್ ಅಡ್ಮಿಟ್ ಆಗಿದ್ದ ರೂಂನ್ನೇ ಶೃಂಗರಿಸಿ ಮದುವೆಗೆ ಸಿದ್ಧಮಾಡಲಾಗಿತ್ತು.

ವೈದ್ಯರು, ವೈದ್ಯಕೀಯ ಸಿಬ್ಬಂದಿ, ಕುಟುಂಬಸ್ಥರು ಹಾಗೂ ಕೆಲ ಆಪ್ತರ ಸಮ್ಮುಖದಲ್ಲಿ ವರ ಮನೋಜ್ ಮಲಗಿದ ಸ್ಥಿತಿಯಲ್ಲೇ ವಧು ರೇವತಿ ಕತ್ತಿಗೆ ತಾಳಿ ಕಟ್ಟಿದ್ದಾನೆ. ಈ ಅಪರೂಪದ ಮದುವೆ ಈಗ ಸುದ್ದಿಯಾಗಿದ್ದು ಜನರು ಅಯ್ಯೋ ಹಿಂಗೋ ಮದುವೆ ಮಾಡ್ತಾರಾ ಅಂತ ಮಾತಾಡಿಕೊಳ್ತಿದ್ದಾರೆ.