ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೇರಳ ಹಾಗೂ ಕರ್ನಾಟಕದ ಗಡಿ ವಿವಾದ ಬಗೆ ಹರಿದಿದ್ದು, ತುರ್ತು ಚಿಕಿತ್ಸೆಗೆ ಮಾತ್ರವೇ ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಸೂಚನೆಯನ್ನು ನೀಡಿದೆ.

ಕೊರೊನಾ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಮಂಗಳೂರು – ಕಾಸರಗೋಡು ರಸ್ತೆಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದ ಮದ್ಯಸ್ಥಿಕೆಯಲ್ಲಿ ಎರಡೂ ರಾಜ್ಯಗಳು ವಿವಾದವನ್ನು ಬಗೆ ಹರಿಸಿಕೊಳ್ಳುವಂತೆ ಸೂಚನೆಯನ್ನು ನೀಡಿತ್ತು.

ಮಾತ್ರವಲ್ಲ ರೋಗಿಗಳ ಚಿಕಿತ್ಸೆ ಅನುಕೂಲ ಕಲ್ಪಿಸುವಂತೆ ಸೂಚಿಸಿತ್ತು. ಈ ಕುರಿತು ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಿರೋ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರದ ಸಾಲಿಸೇಟರ್ ಜನರಲ್ ತುಷಾರ್ ರೇಣುಕಾ ಮಾಹಿತಿ ನೀಡಿದ್ದಾರೆ. ಅಗತ್ಯ ವಸ್ತುಗಳ ಸಾಗಾಟ ಹಾಗೂ ಕೊರೊನಾ ಹೊರತು ಪಡಿಸಿ ಉಳಿದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಗಡಿಯನ್ನು ತೆರವು ಮಾಡಲು ಎರಡೂ ರಾಜ್ಯಗಳು ಒಪ್ಪಿಗೆಯನ್ನು ಸೂಚಿಸಿವೆ.

ಹೀಗಾಗಿ ಗಡಿಯಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರವೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಕೂಡ ಕರ್ನಾಟಕ ಸರಕಾರಕ್ಕೆ ತುರ್ತು ಅಗತ್ಯವಿದ್ದಲ್ಲಿ ಮಾತ್ರವೇ ಗಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಿದೆ.