ಬ್ರಹ್ಮಾವರ : ಕೋಟದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ 5 ಸಿಬ್ಬಂದಿ, ದಿನಸಿ ಅಂಗಡಿಯ ಮಾಲೀಕನ ಕುಟುಂಬ, ಕಾರ್ಕಡ ವೈದ್ಯರ ಸಂಪರ್ಕದಲ್ಲಿದ್ದ ವ್ಯಕ್ತಿ ಸೇರಿ ಒಟ್ಟು 10 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಲತಾ ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಹೋಟೆಲ್ ಹಾಗೂ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಹೋಟೆಲ್ ಮಾಲೀಕರ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇದೀಗ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ 5 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿಗಳ ಕುಂಭಾಶಿ ಹಾಗೂ ಕೊರವಡಿಯಲ್ಲಿರುವ ಮನೆಗಳನ್ನು ಕೋಟ ಕಂದಾಯ ನಿರೀಕ್ಷಕರಾದ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಇನ್ನು ಹೋಟೆಲ್ ಮಾಲೀಕರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹೋಟೆಲ್ ಪಕ್ಕದ ದಿನಸಿ ಅಂಗಡಿ ಮಾಲೀಕರು ಹಾಗೂ ಕುಟುಂಬದವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಅಂಗಡಿ ಮಾಲೀಕರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದ್ದು, ಮಾಲೀಕರ ಪತ್ನಿ ಸೇರಿದಂತೆ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದಿನಸಿ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಕಾರ್ಕಡದಲ್ಲಿ ನೆಲೆಸಿದ್ದ ಹೆಬ್ರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ವೈದ್ಯರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ವೈದ್ಯರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ ಕಾರ್ಕಡದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾರ್ಕಡದಲ್ಲಿರುವ ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ. ಅದ್ರಲ್ಲೂ ಇಂದು ಒಂದೇ ದಿನ 10 ಮಂದಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಹಾಗೂ ಸೋಂಕಿತ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪತ್ತೆ ಹೆಚ್ಚುತ್ತಿದ್ದಾರೆ.