ಮಂಗಳೂರು : ತುಳುನಾಡಿನ ವೀರಪುರುಷರಾಗಿರೋ ಕೋಟಿ -ಚೆನ್ನಯ್ಯರು ನಡೆದಾಡಿದ ಗೆಜ್ಜೆಗಿರಿಯಲ್ಲೀಗ ಇತಿಹಾಸವೇ ಸೃಷ್ಟಿಯಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗೆಜ್ಜೆಗಿರಿಯ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಈ ಬೆನ್ನಲ್ಲೇ ಮಂಗಳೂರಿನ ವಿಮಾನ ನಿಲ್ದಾಣದಕ್ಕೂ ವೀರಪುರುಷರ ಹೆಸರನ್ನು ನಾಮಕರಣ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಬಜೆಪೆ ವಿಮಾನ ನಿಲ್ದಾಣದ ಇದೀಗ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬದಲಾಗಿದೆ. ವಿಮಾನ ನಿಲ್ದಾಣಕ್ಕೆ ಮಂಗಳೂರಿನ ನಿರ್ಮಾತೃ ಯು.ಶ್ರೀನಿವಾಸ ಮಲ್ಯ ಅವರ ಹೆಸರಿಡಬೇಕೆಂಬ ಕೂಗು ಕೇಳಿಬಂದಿತ್ತು. ನಂತರ ಬ್ರಿಟಿಷರ ವಿರುದ್ದ ಹೋರಾಡಿದ್ದ ಉಳ್ಳಾಲದ ವೀರರಾಣಿ ಅಬ್ಬಕ್ಕ ಹೆಸರಿಡಬೇಕೆಂಬ ಮಾತುಗಳು ಚರ್ಚೆಯಾಗಿತ್ತು. ಆದ್ರೀಗ ವೀರಪುರುಷರ ಪುಣ್ಯಭೂಮಿಯಾಗಿರೋ ಗೆಜ್ಜೆಗಿರಿಯಿಂದಲೇ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರನ್ನು ಇಡಬೇಕೆಂಬ ಕೂಗು ಕೇಳಿಬಂದಿದೆ.

ಕಳೆದ ಹಲವು ವರ್ಷಗಳಿಂದಲೂ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರಿಡುವ ಮಾತುಗಳು ಚರ್ಚೆಯಾಗುತ್ತಲೇ ಇದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೂಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರ ಪುರುಷರ ಹೆಸರನ್ನಿಡಲು ಸಹಮತ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಕೂಡ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರನ್ನೇ ಇಡಲಾಗುತ್ತದೆ. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಪಡುಮಲೆಯಲ್ಲಿಯೇ ಗರಡಿ ನಿರ್ಮಾಣ ಮಾಡೋದಕ್ಕೆ ಹೊರಟು ಇದೀಗ ಗೆಜ್ಜೆಗಿರಿಯಲ್ಲಿ ನೆಲೆಸಿರೊ ವೀರಪುರುಷರು ತಾವು ನಡೆದಾಡಿದ ಜಾಗದಲ್ಲಿಯೇ ಹೊಸ ಬಯಕೆಯನ್ನು ಸಂಸದರ ಮೂಲಕ ಹೇಳಿಸಿದ್ದಾರೆ ಅಂತಾ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ತುಳುನಾಡಿನಲ್ಲಿ ಸುಮಾರು 500 ವರ್ಷಗಳ ಹಿಂದೆಯೇ ಸಾಮಾಜಿಕ ಪರಿವರ್ತನೆಗಾಗಿ ಹೋರಾಟ ಮಾಡಿದ ವೀರ ಪುರುಷರು ತುಳುನಾಡಿಗರ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಇಂತಹ ವೀರಪುರಷರ ಹೆಸರು ವಿಮಾನ ನಿಲ್ದಾಣದ ನಾಮಫಲಕದಲ್ಲಿ ರಾರಾಜಿಸಲಿ ಅನ್ನುತ್ತಿದ್ದಾರೆ ಕೋಟಿ ಚೆನ್ನಯ್ಯ ಭಕ್ತರು.