ಬೆಂಗಳೂರು : ಕೊರೊನಾ ವೈರಸ್ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಇನ್ನೂ 15 ದಿನಗಳ ಕಾಲ ಮುಂದುವರಿಸೋ ಸಾಧ್ಯತೆಯಿದೆ. ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿರೊ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಲಾಕ್ ಡೌನ್ ಮುಂದುವರಿಸೋ ಸೂಚನೆಯನ್ನು ನೀಡಿದ್ದಾರೆನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದಾರೆ.

ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು ಮೇ 3ಕ್ಕೆ ಎರಡನೇ ಹಂತದ ಲಾಕ್ ಡೌನ್ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಕೊರೊನಾ ಸೋಂಕು ವ್ಯಾಪಿಸುತ್ತಿರೋ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಆದೇಶ ಮುಂದುವರಿಸುವುದೇ ಸೂಕ್ತ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರೆ, ಕೆಲವರು ಲಾಕ್ ಡೌನ್ ಆದೇಶ ತೆರವುಗೊಳಿಸುವಂತೆ ಮನವಿಮಾಡಿದ್ದಾರೆ.

ಆದರೆ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಕ್ರಮಕೈಗೊಂಡಿದ್ದರಿಂದಲೇ ಕೊರೊನಾ ನಿಯಂತ್ರಣದಲ್ಲಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ವೊಂದೇ ಪರಿಹಾರವೆಂದಿದ್ದಾರೆ. ಹೀಗಾಗಿ ಲಾಕ್ ಡೌನ್ ಆದೇಶ ಇನ್ನೂ 15 ದಿನಗಳ ಕಾಲ ಮುಂದುವರಿಯವುದು ಬಹುತೇಕ ಖಚಿತ.

ಈ ನಡುವಲ್ಲೇ ಗ್ರೀನ್ ಝೋನ್ ಜಿಲ್ಲೆಗಳಿಗೆ ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡೋ ಸಾಧ್ಯತೆಯಿದೆ. ಆದರೆ ಸಾರಿಗೆ ಸಂಚಾರ, ಕಾರ್ಖಾನೆ ಆರಂಭ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನಿರ್ಬಂಧ ಮುಂದುವರಿಸೋ ಸಾಧ್ಯತೆಯಿದೆ. ಆದರೆ ರೆಡ್ ಮತ್ತು ಆರೆಂಜ್ ಝೋನ್ ಗಳ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಮುಂದುವರಿಯುವುದು ಖಚಿತ.