ಮುಂಬೈ: ಹೊಟೇಲ್ ಗಳಿಗೆ ಕೊರೋನಾ ಸಂಕಷ್ಟ ಇನ್ನು ಮುಗಿದಿಲ್ಲ. ಜನರು ಸಾಧ್ಯವಾದಷ್ಟು ಮನೆಯಲ್ಲೇ ಅಡುಗೆ-ಊಟ ತಿಂಡಿ ಮಾಡ್ತಿರೋದರಿಂದ ರೆಸ್ಟೋರೆಂಟ್ ಗಳು ಗ್ರಾಹಕರಿಲ್ಲದೇ ಪರದಾಡುತ್ತಿವೆ. ಹೀಗಾಗಿ ಗ್ರಾಹಕರನ್ನು ಸೆಳೆಯೋಕೆ ಸಾಕಷ್ಟು ಸರ್ಕಸ್ ಕೂಡ ಮಾಡ್ತಿವೆ. ಪುಣೆಯ ಹೊಟೇಲ್ ವೊಂದು ಅದ್ದೂರಿ ಊಟದ ಬಳಿಕ ಗ್ರಾಹಕರಿಗೆ ಬಿಲ್ ನೀಡೋ ಬದಲು ಗಿಫ್ಟ್ ನೀಡೋದಾಗಿ ಆಫರ್ ಮಾಡಿ ಸುದ್ದಿಯಾಗಿದೆ. ‘

ಪುಣೆಯ ಶಿವರಾಜ್ ಹೊಟೇಲ್ ಗ್ರಾಹಕರಿಗೆ ಇಂತಹದೊಂದು ವಿಶೇಷ ಆಫರ್ ನೀಡಿದ್ದು, ಹೊಟೇಲ್ ನ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮಹಾರಾಜ್ ಥಾಲಿ, ಬಾಹುಬಲಿ ಥಾಲಿಯಂತೆ ಶಿವರಾಜ್ ಹೊಟೇಲ್ ಬುಲೆಟ್ ಥಾಲಿಯನ್ನು ಪರಿಚಯಿಸಿದ್ದು, ಈ ತಟ್ಟೆಯನ್ನು ಒಂದು ಗಂಟೆಯಲ್ಲಿ ಖಾಲಿ ಮಾಡುವವರಿಗೆ ರಾಯಲ್ ಏನ್ ಫಿಲ್ಡ್ ಬೈಕ್ ಗಿಫ್ಟ್ ನೀಡುವುದಾಗಿ ಪ್ರಕಟಿಸಿದೆ.

ಬರೋಬ್ಬರಿ ಒಂದು ಟೇಬಲ್ ಅಷ್ಟು ದೊಡ್ಡದ ಈ ಥಾಲಿಯನ್ನು ಸಿದ್ಧಪಡಿಸೋಕೆ 55 ಬಾಣಸಿಗರು ಅಡುಗೆ ಮಾಡುತ್ತಾರೆ. ಈ ಥಾಲಿ ನಾಲ್ಕು ಕೆಜಿ ಮಟನ್, ಕರಿದ ಮೀನು, 12 ತರಹದ ಪದಾರ್ಥ, ಸುರ್ಮಾಯಿ,ಲೆಗ್ ಪೀಸ್, ಕಿಲ್ಲಾಂಬ್ ಕರ್ರಿ,ಮಟನ್ ಮಸಾಲಾ,ಕರಿದ ಹುಂಜ,ಕೋಲಂಬ ಬಿರಿಯಾನಿ,ಎಂಟುರೊಟ್ಟಿ,ಎಂಟು ಚಪಾತಿ ವಿವಿಧ ಪಲ್ಯಗಳು ಹೀಗೆ ದೊಡ್ಡ ಪಟ್ಟಿಯಷ್ಟು ಐಟಂಗಳು ಇರಲಿದೆ.

ತಮ್ಮ ಹೊಟೇಲ್ ನ ಈ ಆಫರ್ ಬಗ್ಗೆ ವಿವರಣೆ ನೀಡಿರೋ ಹೊಟೇಲ್ ಮಾಲೀಕ ಅತುಲ್, ನಾವು ಗ್ರಾಹಕರಿಗೆ ಎರಡು ರೀತಿಯ ಆಫರ್ ನೀಡಿದ್ದೇವೆ, ಮೊದಲ ಆಫರ್ ಬೆಲೆ 4444 ರೂ. ಈ ಬೆಲೆಯಲ್ಲಿ ಬುಲೆಟ್ ಥಾಲಿ ಪಡೆಯುವ ಇಬ್ಬರು ಗ್ರಾಹಕರು ಜೊತೆಯಾಗಿ ಒಂದು ಗಂಟೆಯಲ್ಲಿ ಎಲ್ಲವನ್ನು ತಿಂದು ಮುಗಿಸಬೇಕು.

ಎರಡನೇ ಆಯ್ಕೆಯಲ್ಲಿ 2500 ರೂ ಬೆಲೆಯ ಒಂದು ಮಿನಿ ಬುಲೆಟ್ ಥಾಲಿಯನ್ನು ಒಂದು ಗಂಟೆಯಲ್ಲಿ ಯಾರಾದ್ರೂ ಒಬ್ಬರು ತಿಂದು ಮುಗಿಸಿದ್ರೆ ಅಂಥವರಿಗೆ ಬಹುಮಾನವಾಗಿ ರಾಯಲ್ ಏನ್ ಫಿಲ್ಡ್ ನೀಡೋದಾಗಿ ಘೋಷಿಸಿದ್ದಾರೆ. ಇನ್ನು ಆಫರ್ ನೀಡ್ತಿದ್ದಂತೆ ಹೊಟೇಲ್ ಗೆ ಗ್ರಾಹಕರು ಮುಗಿಬಿದ್ದಿದ್ದು, ಬುಲೆಟ್ ಥಾಲಿ ಸಖತ್ ಆರ್ಡರ್ ಆಗ್ತಿದೆಯಂತೆ.