ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಹಂತರ ಮೇಲೆ ಪೊಲೀಸರು ಶೂಟೌಟ್ ಮಾಡಿದ್ದಾರೆ.

ಮದ್ದೂರು ಮಳವಳ್ಳಿ ರಸ್ತೆಯ ಸಾದೊಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ನಡೆಸಿದ ಶೂಟೌಟ್ ನಲ್ಲಿ ಆರೋಪಿಗಳಾದ ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28) ಮತ್ತು ತೊಪ್ಪನಹಳ್ಳಿಯ ಮಂಜು (30) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೆಪ್ಟೆಂಬರ್ 11 ರಂದು ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದ ಆವರಣದಲ್ಲೇ ಮೂವರು ಅರ್ಚಕರಾದ ಗಣೇಶ್, ಪ್ರಕಾಶ್ ಮತ್ತು ಆನಂದ್ ಅವರ ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಲ್ಲದೇ ದೇವಸ್ಥಾನದ ಹುಂಡಿ ಹಣವನ್ನು ಹೊತ್ತೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣದ ಜಾಡು ಹಿಡಿದ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ 4 ಪೊಲೀಸರ ತಂಡವನ್ನು ರಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಂತಕರು ಈ ಸ್ಥಳದಲ್ಲಿರುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿದ್ದಾರೆ.

ಈ ವೇಳೆ ಹಂತಕರು ಪೊಲೀಸರ ಮೇಲೆ ಚಾಕು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ದಾಳಿಯಿಂದ ಐಪಿಎಸ್ ಶರತ್‍ಕುಮಾರ್ ಹಾಗೂ ಓರ್ವ ಪೇದೆಗೆ ಗಾಯಗಳಾಗಿವೆ. ಹೀಗಾಗಿ ಪೊಲೀಸರು ತಮ್ಮ ರಕ್ಷಣೆಗಾಗಿ ಎದುರಿನಲ್ಲಿ ಇದ್ದ ಮೂವರು ಹಂತಕರ ಮೇಲೆ ಗುಂಡು ಹಾರಿಸಿದ್ದಾರೆ.

ಈ ವೇಳೆ ಹಂತರಿಗೂ ತೀವ್ರವಾದ ಗಾಯಗಳಾಗಿವೆ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹಂತಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.