ಮಂಗಳೂರು : ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿಯಲ್ಲಿ ನಡೆದಿದೆ.
ಸೇವಂತಿಗುಡ್ಡೆ ನಿವಾಸಿ ಆದಿತ್ಯ (23 ವರ್ಷ) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್(27 ವರ್ಷ) ಇರಿತಕ್ಕೊಳಗಾದವರು. ನಿನ್ನ ತಡರಾತ್ರಿ ಚರ್ಚಿನಲ್ಲಿ ಕ್ಯಾಟರಿಂಗ್ ಕೆಲಸಕ್ಕಿದ್ದ ಸಹೋದರನನ್ನು ಕರಲು ತೆರಳಿದ್ದ ವೇಳೆಯಲ್ಲಿ ಹಿಂಬದಿಯಿಂದ ಬಂದ ಅಪರಿಚಿತರು ಬೈಕಿಗೆ ಗುದ್ದಿದ್ದಾರೆ. ಈ ವೇಳೆಯಲ್ಲಿ ರಸ್ತೆಗೆ ಬಿದ್ದ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಕೂಡ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇದೇ ಸ್ಥಳದಲ್ಲಿ ಈ ಹಿಂದೆ ಆರ್ ಎಸ್ಎಸ್ ಮುಖಂಡನೋರ್ವನ ಹತ್ಯೆಗೆ ಯತ್ನ ನಡೆದಿತ್ತು.
ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಉಳ್ಳಾಲ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.