- ಪೂರ್ಣಿಮಾ ಹೆಗಡೆ
ಚಿರಂಜೀವಿ ಸರ್ಜಾ ಇನ್ನಿಲ್ಲದೇ ತಿಂಗಳುಗಳೇ ಕಳೆದಿದೆ. ತುಂಬು ಗರ್ಭಿಣಿ ಮೇಘನಾ ಅತ್ಯಂತ ಖುಷಿಯಾಗಿರಬೇಕಾದ ದಿನಗಳನ್ನು ಕಠಿಣವಾದ ಸ್ಥಿತಿಯಲ್ಲಿ ಕೇವಲ ಚಿರು ನೆನಪುಗಳ ಜೊತೆ ಕಳೆಯುತ್ತಿದ್ದಾರೆ.

ಆದರೆ ತಮ್ಮ ನೋವುಗಳನ್ನು ಹಂಚಿಕೊಂಡು ಮನಸ್ಸನ್ನು ಹಗುರವಾಗಿಸಿಕೊಳ್ಳುವ ಪ್ರಯತ್ನ ಮಾಡಿರೋ ಮೇಘನಾ ಚಿರು ಕೆಲ ನೆನಪು ಹಾಗೂ ಅವರ ಕೊನೆಯ ಮಾತುಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದು, ಚಿರು ಸಾಯುವ ದಿನವೂ ನಾನು ಮತ್ತೆ ಫಿನಿಕ್ಸ್ ನಂತೆ ಎದ್ದು ಬರುತ್ತೇನೆ ಎಂದಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ನಾನು ತುಂಬ ಸಲ ಯೋಚಿಸುತ್ತೇನೆ. ಆದರೆ ಎಲ್ಲವೂ ಅಸ್ಪಷ್ಟ ಎನ್ನಿಸುತ್ತದೆ. ಎಲ್ಲವೂ ಜೂನ್ 7 ಕ್ಕಿಂತ ಮೊದಲಿನಂತೆ ಯಾಕಾಗುವುದಿಲ್ಲ ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಆದರೆ ಆ ದಿನಗಳ ಮತ್ತೆ ಬರೋದಿಲ್ಲಎಂಬುದನ್ನು ನೆನೆಸಿಕೊಂಡ್ರೇ ನನ್ನ ಕಣ್ಣುಗಳು ತುಂಬಿ ಬರುತ್ತವೆ. ಚಿರುಗೆ ತಮ್ಮ ಮಗು ಈ ಲೋಕಕ್ಕೆ ಬರುವ ವಿಚಾರವನ್ನು ಅತ್ಯಂತ ವಿಶಿಷ್ಟವಾಗಿ ಅಭಿಮಾನಿಗಳಿಗೆ ತಿಳಿಸಬೇಕೆಂಬ ಹಂಬಲವಿತ್ತು.ಆದರೆ ಅತ್ಯಂತ ದುಃಖದ ಸಂದರ್ಭದಲ್ಲಿ ಇದನ್ನು ತಿಳಿಸುವ ಸ್ಥಿತಿ ಎದುರಾಯಿತು ಎಂದು ಮೇಘನಾ ಕಣ್ಣೀರಾಗಿದ್ದಾರೆ.

ನನಗೆ ಸರಳವಾದ ಸೀಮಂತ ಮಾಡಿಕೊಳ್ಳುವ ಕನಸಿತ್ತು. ಆದರೆ ಚಿರುಗೆ ಅದ್ದೂರಿಯಾಗಿ ಸೀಮಂತ ಮಾಡಬೇಕೆಂಬ ಆಸೆಯಿತ್ತು. ಹೀಗಾಗಿ ನಾನು ಚಿರು ಆಸೆಯಂತೆಯೇ ಅದ್ದೂರಿಯಾಗಿ ಅವರ ಮನೆಯಲ್ಲಿ ಒಮ್ಮೆ, ನಮ್ಮ ಮನೆಯಲ್ಲಿ ಒಮ್ಮೆ ಹಾಗೂ ಹೊಟೇಲ್ ನಲ್ಲಿ ಚಿರು ಸ್ನೇಹಿತರ ಜೊತೆ ಒಮ್ಮೆ ಅದ್ದೂರಿಯಾಗಿ ಸೀಮಂತ ಆಚರಿಸಿಕೊಂಡಿದ್ದೇನೆ.

ಚಿರು ಜೂನ್ 7 ರಂದು ಮನೆಯಲ್ಲಿ ಬಿದ್ದರು. ಅವರಿಗೆ ಪ್ರಜ್ಞೆ ತಪ್ಪಿತ್ತು. ತಕ್ಷಣ ಅಂಬ್ಯುಲೆನ್ಸ್ ತಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಜ್ಞೆ ಬಂದಿತ್ತು. ಆಗ ನನ್ನ ಬಳಿ ನನಗೇನು ಆಗೋದಿಲ್ಲ. ನಾನು ಫಿನಿಕ್ಸ್ ನಂತೆ ಮತ್ತೆ ಎದ್ದು ಬರುತ್ತೇನೆ ಎಂದಿದ್ದರು. ಅದೇ ಅವರು ನನ್ನ ಜೊತೆ ಆಡಿದ ಕೊನೆ ಮಾತು. ಆ ದಿನಕ್ಕಾಗಿ ನಾನು ಮತ್ತೆ ಕಾಯುತ್ತಿದ್ದೇನೆ ಎಂದಿದ್ದಾರೆ ಮೇಘನಾ.

ಚಿರು ಸ್ಟಾರ್ ಆಗಿರಲಿಲ್ಲ. ಆದರೆ ಅವರ ಮೇರು ವ್ಯಕ್ತಿತ್ವ ಸ್ಟಾರ್ ಆಗಿತ್ತು. ಅವರ ಬಗೆಗಿನ ವಿವಾದಗಳು ಅಥವಾ ಟೀಕೆ,ಗಾಸಿಪ್ ಗಳಿಗೆ ನಾನು ಉತ್ತರಿಸಲು ಬಯಸುವುದಿಲ್ಲ ಎಂದಿರುವ ಮೇಘನಾ, ಚಿರು ಆಸೆಯಂತೆ, ಅವರ ವ್ಯಕ್ತಿತ್ವದಂತೆ ನಾನು ನನ್ನ ಮಗುವನ್ನು ಬೆಳೆಸುತ್ತೇನೆ. ಯಾವುದಕ್ಕೂ ಅಂಜುವುದಿಲ್ಲ. ಚಿರು ಸದಾ ನನ್ನೊಂದಿಗೆ ಇದ್ದಾರೆ. ನನ್ನ ಕುಟುಂಬ,ನನ್ನ ಹಾಗೂ ಚಿರು ಸ್ನೇಹಿತರು ನನ್ನ ಶಕ್ತಿ ಎಂದು ಸಮಧಾನಿಸಿಕೊಳ್ಳುತ್ತಾರೆ ಮೇಘನಾ.

ಎಲ್ಲ ಹೆಣ್ಣಿಗೂ ತಾಯ್ತನ ಅನ್ನೋದು ಬದುಕಿನ ಸುವರ್ಣಗಳಿಗೆ. ಆದರೆ ನನಗೆ ಲಾಕ್ ಡೌನ್ ಅನ್ನೋದು ಅಂತಹ ಸುವರ್ಣಗಳಿಗೆಯನ್ನು ಸವಿಯುವ ಅವಕಾಶ ಕೊಟ್ಟಿತ್ತು. ನಾನು ಚಿರು ಮರೆಯಲಾಗದ ದಿನಗಳನ್ನು ಕಳೆದೆವು. ಆದರೆ ಅದರ ಕೊನೆಯಲ್ಲಿ ಚಿರುವನ್ನು ನಾನು ದೈಹಿಕವಾಗಿ ಕಳೆದುಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ಈ ನೋವಿಗೆ ಕೊನೆಯಿಲ್ಲ ಎಂದು ಕಣ್ತುಂಬಿಕೊಂಡು ಮೌನವಾಗುತ್ತಾರೆ ಮೇಘನಾ.