ಮೈಸೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ನನ್ನು ಯಾಕೆ ಬಂಧಿಸಿಲ್ಲ, ಯಾಕೆ ವಿಚಾರಣೆಯನ್ನೂ ನಡೆಸಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಟಿಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ನೇರವಾಗಿ ಆರೋಪಿಸಿರುವ ಪಟ್ಟಿಯಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರಿದೆ. ಆದರೆ ಇದುವರೆಗೂ ಜಮೀರ್ ನನ್ನು ಪೊಲೀಸರು ಬಂಧಿಸಿಲ್ಲ. ಮಾತ್ರವಲ್ಲ ವಿಚಾರಣೆಯನ್ನೂ ನಡೆಸಿಲ್ಲ. ಇದರ ಹಿಂದಿನ ಉದ್ದೇಶವೇನು ಅಂತಾ ಪ್ರಶ್ನಿಸಿದ್ದಾರೆ. ಸಂಬರಗಿ ಹೇಳಿಕೆಯ ಬಗ್ಗೆ ಅನುಮಾನಗಳಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಿ, ಪೂರಕ ದಾಖಲೆಗಳನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರಿಸಿ ಎಂದಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರು ನೀಡಿದ ಹೇಳಿಕೆಯಿಂದಲೇ ಡ್ರಗ್ಸ್ ದಂಧೆ ಬಯಲಾಗಿತ್ತು. ಇಂದ್ರಜಿತ್ ಹೇಳಿಕೆಯಲ್ಲಿಯೂ ಹಲವರ ಬಗ್ಗೆ ಅನುಮಾನಗಳಿವೆ. ಕೇವಲ ನಟಿಯರಿಬ್ಬರನ್ನು ತಂದು ವಿಚಾರಣೆ ನಡೆಸಿದ್ರೆ ಸಾಕಾಗೋದಿಲ್ಲ. ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದೂ ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಎಂದು ಹೇಳಿದ್ದಾರೆ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಇದು ಶಾಲಾ, ಕಾಲೇಜುಗಳಿಗೂ ಹಬ್ಬುತ್ತಿದ್ದು, ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿದ್ದಾರೆ. ಇದನ್ನು ಸೇವಿಸಿದರೆ ವಾಸನೆ ಸಹ ಬರುವುದಿಲ್ಲ. ಹೀಗಾಗಿ ಯುವಕರು ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಈ ಸಮಾಜದ ಪಿಡುಗನ್ನು ತೊಲಗಿಸಲು ಸಮಗ್ರ ತನಿಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.