ಕೇರಳ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪುನರ್ಜನ್ಮದ ಮೌಢ್ಯತೆಗೆ ಉಪನ್ಯಾಸಕ ದಂಪತಿ ತನ್ನಿಬ್ಬರು ಮಕ್ಕಳನ್ನು ಕೊಲೆಗೈದ ಪ್ರಕರಣ ಮಾಸುವ ಮುನ್ನವೇ ಕೇರಳದಲ್ಲಿ ಅಲ್ಲಾಹನನ್ನು ಮೆಚ್ಚಿಸಲು ಶಿಕ್ಷಕಿಯೋರ್ವಳು ತನ್ನ 6 ವರ್ಷದ ಮಗನನ್ನೇ ಬಲಿಕೊಟ್ಟ ಅಮಾನವೀಯ ಘಟನೆ ನಡೆದಿದೆ.
ಕೇರಳದ ಪಾಲಕ್ಕಾಡ್ ನ ನಿವಾಸಿಯಾಗಿರುವ ಶಾಹಿದಾ (31 ವರ್ಷ) ಎಂಬಾಕೆ ತನ್ನ 6 ವರ್ಷದ ತನ್ನ ಮಗ ಅಮಿಲ್ ನನ್ನು ಕತ್ತು ಸೀಳಿ ಕೊಲೆಗೈದಿದ್ದಾಳೆ. ನಂತರದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ, ತಾನೇ ಮಗನನ್ನು ಕೊಂದಿರುವುದಾಗಿ ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಕಾರಣ ಕೇಳಿ ಶಾಕ್ ಆಗಿದ್ದಾರೆ.
ಶಾಹಿದಾ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಒಟ್ಟು ಮೂವರು ಮಕ್ಕಳಿದ್ದು, ಇದೀಗ ಶಾಹಿದಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಗಂಡ ಸುಲೈಮಾನ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಗಂಡ ಮತ್ತು ಮಕ್ಕಳು ಒಂದು ಕೋಣೆಯಲ್ಲಿ ಮಲಗಿದ್ರೆ, ಮತ್ತೊಂದು ಕೋಣೆಯಲ್ಲಿ ತನ್ನ ಕಿರಿಯ ಮಗನ ಜೊತೆಗೆ ಶಾಹಿದಾ ಮಲಗಿದ್ದಳು. ರಾತ್ರಿ 3 ಗಂಟೆಯ ಸುಮಾರಿಗೆ ಮಗುವನ್ನ ಶೌಚಾಲಯಕ್ಕೆ ಕರೆದೊಯ್ದು, ಕೈಕಾಲು ಕಟ್ಟಿ, ನಂತರ ಕತ್ತನ್ನು ಸೀಳಿ ಕೊಲೆಗೈದಿದ್ದಳು. ಆದರೆ ಗಂಡ ಹಾಗೂ ಇಬ್ಬರು ಮಕ್ಕಳನ್ನು ಬೇರೊಂದು ಕೋಣೆಯಲ್ಲಿ ಮಲಗಿದ್ದರಿಂದಾಗಿ ಈ ಘಟನೆಯ ಬಗ್ಗೆ ತಿಳಿದಿರಲಿಲ್ಲ.
ಖುದ್ದು ಶಾಹೀದಾಳೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ರಕ್ತದ ಮಡುವಲ್ಲಿ ಬಿದ್ದಿದ್ದ ಮಗುವನ್ನು ಕಂಡ ಪಾಲಕ್ಕಾಡ್ ಸೌತ್ ಠಾಣೆಯ ಪೊಲೀಸರಿಗೆ ಶಾಕ್ ಆಗಿತ್ತು. ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆಯೇ ಶಾಹಿದಾ ತಾನು ಮಗನನ್ನು ಅಲ್ಲಾಹನಿಗೆ ಅರ್ಪಣೆ ಮಾಡಿದ್ದೇನೆ. ತಾನು ಅಲ್ಲಾಹನನ್ನು ಮೆಚ್ಚಿಸಲು ಈ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಸುಶಿಕ್ಷಿತರೇ ಮೌಢ್ಯಕ್ಕೆ ಒಳಗಾಗುತ್ತಿದ್ದು, ತಮ್ಮ ಮಕ್ಕಳನ್ನೇ ಬಲಿ ಕೊಡ್ತಾ ಇರೋದು ದುರಂತವೇ ಸರಿ. ಶಾಹಿದಾ ಅಲ್ಲಾಹನ ಮೆಚ್ಚಿಸೋ ಸಲುವಾಗಿಯೇ ಈ ಕೃತ್ಯವನ್ನೆಸಗಿದ್ದಾಳಾ. ಇಲ್ಲಾ ಇನ್ಯಾವುದಾದ್ರೂ ಕಾರಣವಿದೆಯಾ ಅನ್ನೋ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.