ನೆಲಮಂಗಲ: ತಂದೆ ಹಾಗೂ ಚಿಕ್ಕಪ್ಪನ ನಡುವಿನ ದ್ವೇಷಕ್ಕೆ ಏನು ಅರಿಯದ ಮುಗ್ಧ ಕಂದಮ್ಮ ಜೀವತೆತ್ತ ಘಟನೆಗೆ ನೆಲಮಂಗಲದ ದಾನೋಜಿಪಾಳ್ಯ ಸಾಕ್ಷಿಯಾಗಿದೆ. ತಂದೆಯ ಮೇಲಿನ ದ್ವೇಷಕ್ಕೆ ಸ್ವಂತ ಚಿಕ್ಕಪ್ಪನೇ ಮಗುವನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಕೊಲೆಗೈಯ್ದು ಪರಾರಿಯಾಗಿದ್ದಾನೆ.

ದಾನೋಜಿಪಾಳ್ಯದ ನಿವಾಸಿ 6 ವರ್ಷದ ಬಾಲಕ ರಿಯಾನ್ ಮೃತ ದುರ್ದೈವಿ. ಈತನ ಚಿಕ್ಕಪ್ಪ ದಾದಾಪೀರ್ ಇಂತಹದೊಂದು ರಾಕ್ಷಸಿ ಕೃತ್ಯ ಎಸಗಿದ ಪಾಪಿ.

ದಾದಾಪೀರ್ ಗೆ ರಿಯಾನ್ ಪೋಷಕರಾದ ಚಮನ್ ಹಾಗೂ ಆಯಿಷಾ ಮೇಲೆ ಹಳೆ ದ್ವೇಷ ಇತ್ತಂತೆ. ಇದಕ್ಕಾಗಿ ಆ ಬಾಲಕನ ಹತ್ಯೆಗೆ ಸ್ಕೆಚ್ ಹಾಕಿದ ದಾದಾಪೀರ್ ಆತನನ್ನು ಆಟವಾಡಿಸುವ ನೆಪದಲ್ಲಿ ಕರೆದೊಯ್ದು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಹತ್ಯೆಗೈಯ್ದು ಪರಾರಿಯಾಗಿದ್ದಾನೆ.

ಮಗು ಕಾಣಿಸದೇ ಪೋಷಕರು ಹುಡುಕಾಡಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ದಾದಾಪೀರ ಬಂಧನಕ್ಕೆ ಬಲೆ ಬೀಸಿದ್ದಾರೆ.