ಕರೋನಾ ಸಂಕಷ್ಟದಿಂದ ಕಂಗೆಟ್ಟ ಮೃಗಾಲಯಗಳಿಗೆ ಸಹಾಯ ಮಾಡುವಂತೆ ದರ್ಶನ್ ಕೋರಿಕೆ ಮುಂದಿಟ್ಟಿದ್ದೇ ತಡ ಝೂಗಳಿಗೆ ಸಹಾಯಹಸ್ತದ ಹೊಳೆಯೇ ಹರಿದು ಬರುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ಕೂಡ ದಚ್ಚು ಮನವಿಗೆ ಸ್ಪಂದಿಸಿದ್ದು, ರಿಯಲ್ ಸ್ಟಾರ್ ಉಪ್ಪಿ ಕೂಡ ಪ್ರಾಣಿ ದತ್ತು ಪಡೆದಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಮೃಗಾಲಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಮನವಿ ಮಾಡಿದ್ದರು. ದರ್ಶನ್ ಮನವಿಗೆ ಅಭಿಮಾನಿಗಳುಹಾಗೂ ಜನಸಾಮಾನ್ಯರ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸ್ಪಂದಿಸಿದ್ದಾರೆ.
ಮೈಸೂರು ಮೃಗಾಲಯದಲ್ಲಿರುವ ಆಫ್ರಿಕನ ಆನೆಯೊಂದನ್ನು ಉಪೇಂದ್ರ ದತ್ತು ಪಡೆದಿದ್ದಾರೆ. 1.75 ಸಾವಿರ ರೂಪಾಯಿ ವಾರ್ಷಿಕ ವೆಚ್ಚ ಭರಿಸಿ ಉಪ್ಪಿ ಈ ಆನೆಯನ್ನು ದತ್ತು ಪಡೆದಿದ್ದಾರೆ. ಆನೆ ದತ್ತು ಪಡೆದಿರುವ ಪ್ರಮಾಣ ಪತ್ರವನ್ನು ಉಪೇಂದ್ರ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಣಿಗಳೇ ಗುಣದಲಿ ಮೇಲು, ನನ್ನ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ ಆನೆಯೊಂದನ್ನು ದತ್ತು ಪಡೆದು ದರ್ಶನ್ ಅವರ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದೇನೆ ಎಂದಿದ್ದಾರೆ.
ಉಪೇಂದ್ರ ಮಾತ್ರವಲ್ಲ, ರಾಬರ್ಟ್ ನಿರ್ಮಾಪಕ ಉಮಾಪತಿ ಕೂಡ ಮೈಸೂರು ಝೂದಿಂದ ಚಾಮುಂಡಿ ಹೆಸರಿನ ಆನೆಮರಿಯನ್ನು ದತ್ತು ಪಡೆದಿದ್ದಾರೆ. ಈ ವಿಚಾರವನ್ನು ಸ್ವತಃ ದರ್ಶನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಕೊವೀಡ್ ನಿಂದ ಮನುಷ್ಯರಷ್ಟೇ ಮೃಗಾಲಯಗಳು ಸಂಕಷ್ಟದಲ್ಲಿದ್ದು ಸಹಾಯಕ್ಕೆ ಧಾವಿಸುವಂತೆ ಇತ್ತೀಚಿಗೆ ದರ್ಶನ್ ವಿಡಿಯೋ ಮಾಡಿ ಮನವಿ ಮಾಡಿದ್ದರು.