ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅರೆಸ್ಟ್ : ಪೆಟ್ರೋಲ್ ಬೆಲೆ ವಿರುದ್ದ ಸಿಡಿದೆದ್ದ ಕೈ ನಾಯಕರು

ಬೆಂಗಳೂರು : ದೇಶದಲ್ಲಿ ತೈಲ ಬೆಲೆ ಏರಿಕೆಯ ವಿರುದ್ದ ಕಾಂಗ್ರೆಸ್ ಸಿಡಿದೆದ್ದಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿದಾಟುತ್ತಿದ್ದಂತೆಯೇ ಕೆಪಿಸಿಸಿ 5 ದಿನಗಳ ಪ್ರತಿಭಟನೆಗೆ ಕರೆ ನೀಡಿದ್ದು, ಪ್ರತಿಭಟನೆ ನಡೆಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಗುಂಡೂರಾವ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಇಂದಿನಿಂದ ರಾಜ್ಯದಲ್ಲಿ 5 ದಿನಗಳ ಕಾಲ 5000 ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆಯಲ್ಲಿ ಸಿದ್ದರಾಮಯ್ಯ ಪೆಟ್ರೋಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 59 ರೂಪಾಯಿ ಇದ್ರೆ, ರಾಮರಾಜ್ಯ ಭಾರತದಲ್ಲಿ ನೂರರ ಗಡಿದಾಟಿದೆ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ 9 ರೂಪಾಯಿ ತೆರಿಗೆ ವಿಧಿಸಲಾಗುತ್ತಿದ್ರೆ, ಇದೀಗ ಕೇಂದ್ರ ಸರಕಾರ 31 ರೂಪಾಯಿ ತೆರಿಗೆ ವಿಧಿಸುತ್ತಿದೆ. ಹೀಗಾಗಿ ಶೇ.50 ರಷ್ಟು ತೆರಿಗೆಯನ್ನು ಇಳಿಸುವ ಮೂಲಕ ಪೆಟ್ರೋಲ್ ಬೆಲೆ ಇಳಿಸಬೇಕೆಂದು ಆಗ್ರಹಿಸಿದ್ದಾರೆ.

ಕೋವಿಡ್ ನಿಯಮದ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯ ವರೆಗೆ ಮಾತ್ರವೇ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರಿಗೆ ಅನುಮತಿಯನ್ನು ನೀಡಲಾಗಿತ್ತು. ಆದ್ರೆ 10 ಗಂಟೆಯ ನಂತರವೂ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಕೈ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರತಿಭಟನೆ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ.

Comments are closed.