ಮೈಸೂರು: ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಲು ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಿರುವ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಆದರೆ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಈ ನಿಯಮಗಳನ್ನು ಗಾಳಿಗೆ ತೂರಿ ಹೋಮ-ಹವನದಲ್ಲಿ ಭಾಗಿಯಾಗಿದ್ದು, ಎಫ್ಆಯ್ಆರ್ ದಾಖಲಿಸುವಂತೆ ಹೈಕೋರ್ಟ್ ಅಭಿಪ್ರಾಯಿಸಿದೆ.

ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತೆರಳುವಂತಿಲ್ಲ ಹಾಗೂ ಯಾವುದೇ ದೇವಾಲಯದಲ್ಲಿ ಅರ್ಚಕರನ್ನು ಹೊರತುಪಡಿಸಿ ಇನ್ಯಾರಿಗೂ ಪ್ರವೇಶವಿಲ್ಲ. ಹೋಮ-ಹವನದಂತಹ ಧಾರ್ಮಿಕ ಕಾರ್ಯನಡೆಸುವಂತಿಲ್ಲ ಎಂದು ಸರ್ಕಾರದ ಲಾಕ್ ಡೌನ್ ಆದೇಶದಲ್ಲಿ ಹೇಳಲಾಗಿದೆ.

ಆದರೆ ಸಿಎಂ ಪುತ್ರ ವಿಜಯೇಂದ್ರ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ್ದು, ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಹೋಮಹವನ ನಡೆಸಿದ್ದರು. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸ್ವತ: ಸಿಎಂ ಬಿಎಸ್ವೈ ಪುತ್ರನೇ ಕೊರೋನಾದಂತಹ ಸಂಕಷ್ಟದ ಹೊತ್ತಿನಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರಾದ ಜಿ.ಆರ್.ಮೋಹನ್ ಎಂಬುವವರು ಯಡಿಯೂರಪ್ಪ ಪುತ್ರನ ವಿರುದ್ಧ ಹೈಕೋರ್ಟ್ ಗೆ ಮೆಮೋ ಸಲ್ಲಿಸಿದ್ದರು.

ಮೆಮೋ ವಿಚಾರಣೆ ನಡೆಸಿದ ನ್ಯಾಯಾಲಯ, ಎಪಿಡೆಮಿಕ್ ಡಿಸೀಸ್ ಕಾಯ್ದೆ1897 ಅಡಿಯಲ್ಲಿ ಆರೋಪಿತನ ನಡಾವಳಿ ಅಪರಾಧದಿಂದ ಕೂಡಿದೆ ಎಂದು ಅಭಿಪ್ರಾಯಿಸಿದ್ದು, ಎಫ್ಆಯ್ಆರ್ ದಾಖಲಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದೆ. ಅಲ್ಲದೇ ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮದ ಬಗ್ಗೆಯೂ ಹೈಕೋರ್ಟ್ ಮಾಹಿತಿ ಕೋರಿದೆ.

ಈಗಾಗಲೇ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಸಿಎಂ ಪುತ್ರ ವಿಜಯೇಂದ್ರ್ ಹಾಗೂ ದೇಗುಲದ ಅರ್ಚಕರ ವಿರುದ್ಧ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದೆ.

ವಿಜಯೇಂದ್ರ್ ವಿರುದ್ಧ ಎಫ್.ಆಯ್.ಆರ್ ದಾಖಲಿಸಬೇಕು. ಸರ್ಕಾರಿ ನೌಕರರು ಹಾಗೂ ಅರ್ಚಕರನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್ ಕೂಡ ಒತ್ತಾಯಿಸಿದೆ.

ಒಟ್ಟಿನಲ್ಲಿ ಇಷ್ಟು ದಿನ ಬಿಜೆಪಿಯ ಆಂತರಿಕ ಕಲಹಕ್ಕೆ ಕಾರಣವಾಗುತ್ತಿದ್ದ ಸಿಎಂ ಪುತ್ರ ವಿಜಯೇಂದ್ರ ಈಗ ಕೊರೋನಾ ನಿಯಮ ಉಲ್ಲಂಘನೆಯ ಮೂಲಕ ಸರ್ಕಾರಕ್ಕೆ ಬಹಿರಂಗವಾಗಿಯೇ ಮುಜುಗರ ತರುವ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಮಾತುಕೇಳಿಬರುತ್ತಿದೆ.
