ಮಂಗಳೂರು : ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ಕೊರೊನಾ ಎಫೆಕ್ಟ್ ಇದೀಗ ನಂದಿನಿ ಹಾಲಿಗೂ ತಟ್ಟಿದ್ದು, ಕೆಎಂಎಫ್ ಮಂಗಳೂರು ಘಟಕ ತಾತ್ಕಾಲಿಕವಾಗಿ ರೈತರಿಂದ ಹಾಲು ಸಂಗ್ರಹವನ್ನು ಸ್ಥಗಿತಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಎರಡೆರಡು ಪ್ರಕರಣ ಪತ್ತೆಯಾಗುತ್ತಲೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಲಾಕ್ ಡೌನ್ ಆಚರಿಸಲಾಗುತ್ತಿರೋದ್ರಿಂದಾಗಿ ನಂದಿನಿ ಡೀಲರ್ ಗಳು ಮಾರ್ಚ್ 28ರಂದು ಅಂಗಡಿ ತೆರೆದಿಲ್ಲ. ಅಲ್ಲದೇ ಹಾಲು ಸ್ವೀಕರಿಸಲು ನಿರಾಕರಿಸಿದ್ದಾರೆ. ಇದರಿಂದಾಗಿ ಸುಮಾರು 9 ಲಕ್ಷ ಲೀಟರ್ ನಷ್ಟು ಹಾಲು ದಕ್ಷಿಣ ಕನ್ನಡದ ಕೆಎಂಎಫ್ ಘಟಕಕ್ಕೆ ವಾಪಾಸ್ ಬಂದಿದೆ.

ವಾಪಾಸ್ ಬಂದಿರುವ ಹಾಲನ್ನು ಫೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ಆದರೆ ಇಂದು ಕೂಡ ಹಾಲು ಸಂಗ್ರಹವಾದ್ರೆ ದಾಸ್ತಾನು ಮಾಡಲು ಕಷ್ಟಕರವಾಗಲಿದೆ. ಅಲ್ಲದೇ ಚನ್ನರಾಯಪಟ್ಟಣ, ಧಾರವಾಡ, ಮದರ್ ಡೇರಿ, ಮಂಡ್ಯ ಮುಂತಾದ ಕಡೆಯ ಹಾಲು ಪರಿವರ್ತನಾ ಘಟಕಗಳಲ್ಲಿ ಈಗಾಗಲೇ ದಾಸ್ತಾನು ಬಾಕಿ ಇರುವುದರಿಂದ ಪರಿವರ್ತನೆ ಕೂಡಾ ಅಸಾಧ್ಯವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ನಮ್ಮ ಹಾಲು ಒಕ್ಕೂಟದ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಕೆಎಂಎಫ್ ಮಂಗಳೂರು ಘಟಕದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಅವರು ತಿಳಿಸಿದ್ದಾರೆ.

ಕೆಎಂಎಫ್ ಹಾಲು ಖರೀದಿಗೆ ಹಿಂದೇಟು ಹಾಕುತ್ತಿರೋದ್ರಿಂದಾಗಿ ರೈತರು ಅತಂಕಕ್ಕೆ ಸಿಲುಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಅಗತ್ಯ ವಸ್ತುವಾಗಿರುವ ಹಾಲಿನ ಮಾರಾಟಕ್ಕೆ ಅವಕಾಶ ನೀಡದೇ ಇದ್ದಲ್ಲಿ ರೈತರಿಂದ ಹಾಲನ್ನು ಖರೀದಿಸದೇ ಇರಲು ನಿರ್ಧರಿಸದೆ ಎನ್ನಲಾಗುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಲು ಮಾರಾಟಕ್ಕೆ ಅವಕಾಶ ನೀಡುವುದಾಗಿ ಹೇಳಿರುವುದರಿಂದ ಮುಂದಿನ ದಿನಗಳಲ್ಲಿ ಕೆಎಂಎಫ್ ಹಾಲು ಖರೀದಿಗೆ ಮುಂದಾಗೋ ಸಾಧ್ಯತೆಯಿದೆ.