ವಿದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಬೆಂಗಳೂರು ನಗರ ಜಿಲ್ಲಾಡಳಿತದ ಜೊತೆ ಬಿಬಿಎಂಪಿ ಸಭೆ ನಡೆಸಿದ್ದು, ಹಲವು ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ವಿದೇಶದಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಇದು ಕೊರೋನಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ಹಾಗೂ ಬೇಗ ಹರಡುವುದರಿಂದ ನಗರದಾದ್ಯಂತ ಹೈ ಅಲರ್ಟ್ ಗೆ ನಗರಾಢಳಿತ ಸಿದ್ಧತೆ ನಡೆಸಿದೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣದಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಅಲ್ಲಿಯೇ ಕೊರೋನಾ ಟೆಸ್ಟ್ ನಡೆಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಇದಕ್ಕಾಗಿ ಈಗಾಗಲೇ ಬಿಬಿಎಂಪಿ ಸಿದ್ಧತೆ ನಡೆಸಿದ್ದು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸರಾಸರಿ 160 ಯಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ನಿನ್ನೇ ಒಂದೇ ದಿನ ಬೆಂಗಳೂರಿನಲ್ಲಿ 224 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತಿ ಹೆಚ್ಚು ಪ್ರಕರಣಗಳು ಅನೇಕಲ್ ಭಾಗದಲ್ಲಿ ದಾಖಲಾಗಿದೆ.
ವರ್ತೂರಿನ ವಸತಿ ಶಾಲೆ ಹಾಗೂ ಇನ್ನೊಂದು ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದು ಚಿಕಿತ್ಸೆ ನೀಡಿ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ನಗರದ ಗಡಿಭಾಗದಲ್ಲೂ ಕಟ್ಟೆಚ್ಚರ ವಹಿಸಲು ಆಧಿಕಾರಿಗಳಿಗೆ ಬಿಬಿಎಂಪಿ ಸೂಚಿಸಿದ್ದು ಕೇರಳದಿಂದ ಬರುವ ಖಾಸಗಿ ವಾಹನಗಳನ್ನು ಪರಿಶೀಲಿಸಿ ಬಿಡುವ ಆದೇಶ ನೀಡಲಾಗಿದೆ.
ಈಗಾಗಲೇ ನಗರದಲ್ಲಿ 63 ಆಕ್ಟಿವ್ ಕಂಟೋನ್ಮೆಂಟ್ ಜೋನ್ ಗಳಿದ್ದು ಇವುಗಳ ಬಗ್ಗೆ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆ. ಅಲ್ಲದೇ ಕೊರೋನಾ ತಡೆಗೆ ವಾಕ್ಸಿನ್ ಒಂದೇ ಪರಿಹಾರವಾಗಿರೋದರಿಂದ ವಾಕ್ಸಿನ್ ಡೋಸ್ ಪಡೆಯುವಂತೆ ಜನರನ್ನು ಮನವೊಲಿಸುವ ಪ್ರಯತ್ನ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದೆ.
ಅಲ್ಲದೇ ವಾಹನಗಳಲ್ಲಿ ಮೈಕ್ ಬಳಸಿ ಕೊರೋನಾ ಲಸಿಕೆಯ ಕುರಿತು ಅರಿವು ಮೂಡಿಸುವ ಹಾಗೂ ಲಸಿಕೆ ಪಡೆಯುವ ಕುರಿತು ತಿಳುವಳಿಕೆ ಮೂಡಿಸುವಂತ ಕೆಲಸ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಧಾರವಾಡ,ಹುಬ್ಬಳ್ಳಿಯಲ್ಲೂ ಕೊರೋನಾ ಸ್ಪೋಟಗೊಂಡಿದ್ದು ಮೈಸೂರು ಕೋಲಾರ,ಚಾಮರಾಜನಗರ ಸೇರಿದಂತೆ ಹಲವು ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್ ನಿಯಮಗಳನ್ನು ರೂಪಿಸಲು ಸಿಎಂ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದು ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಒಮಿಕ್ರಾನ್ ಆತಂಕ ಹೆಚ್ಚಿದೆ.