ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಕೊನೆಗೂ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದ್ದು, ಸಾರ್ವಜನಿಕವಾಗಿ ವರ್ಷದ ಕೊನೆ ಹಾಗೂ ಹೊಸ ವರ್ಷ ಆಚರಿಸಲು ಅವಕಾಶವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಶನಿವಾರ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕೋವಿಡ್ 2 ಅಲೆಯ ಕಾರಣಕ್ಕೆ ವಿಜ್ಞಾನಿಗಳ ಸಲಹೆ ಪಡೆದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಈಗಾಗಲೇ ಗೃಹ ಸಚಿವರು ಹಾಗೂ ಇತರರೊಂದಿಗೆ ಸಭೆ ನಡೆಸಿದ್ದು, ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಧ್ಯದಲ್ಲೇ ಈ ಬಗ್ಗೆ ಸಧ್ಯದಲ್ಲೇ ವಿಸ್ಕೃತವಾದ ಮಾರ್ಗಸೂಚಿ ಬಿಡುಗಡೆಮಾಡಲಿದ್ದೇವೆ ಎಂದಿದ್ದಾರೆ.

ಹೊಟೇಲ್ ಗಳಲ್ಲಿ ಪಾರ್ಟಿ ಮಾಡುವುದಕ್ಕೆ ಅವಕಾಶವಿದೆ. ಆದರೆ ಕಡ್ಡಾಯವಾಗಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಶೇಕಡಾ 50 ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಬೇಕು. ಪೊಲೀಸರಿಗೆ ಈ ಬಗ್ಗೆ ಬಂದೋಬಸ್ತ ಏರ್ಪಡಿಸಲು ಸೂಚಿಸಲಾಗಿದೆ ಎಂದು ಆರ್.ಅಶೋಕ್ ವಿವರಣೆ ನೀಡಿದ್ದಾರೆ.

ಇಷ್ಟು ವರ್ಷಗಳ ಕಾಲ ಅದ್ದೂರಿಯಾಗಿ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ನಡೆಸಲಾಗಿದೆ. ಈ ವರ್ಷ ಕರೋನಾ ಕಾರಣಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಜನರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು. ಆರೋಗ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು ಎಂದರು.

ಪ್ರತಿವರ್ಷ ಡಿಸೆಂಬರ್ 31 ರಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅದ್ದೂರಿಯಾಗಿ ಹಾಡು-ಕುಣಿತದ ಜೊತೆ ಹೊಸ ವರ್ಷ ಆಚರಿಸುವ ಸಂಪ್ರದಾಯವಿದೆ. ಆದರೆ ಈ ವರ್ಷ ಕೊರೋನಾ ಕಾರಣಕ್ಕೆ ಸಂಭ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದ್ದು, ಯುವಜನತೆಗೆ ಈ ವಿಚಾರ ಸಾಕಷ್ಟು ನಿರಾಸೆ ತರಲಿದೆ.