ಬೆಂಗಳೂರು : ಸಿಎಂ ಆಪ್ತ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸಂತೋಷ್ ಅವರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತೆ. ಇದೆ ಕಾರಣದಿಂದಲೇ ಸಂತೋಷ್ ಇಂತಹ ನಿರ್ಧಾರಕ್ಕೆ ಬಂದಿದ್ರಾ ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿದೆ.

ಹಲವು ವರ್ಷಗಳಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದ ಸಂತೋಷ್ ರಾಜಕೀಯ ವಾಗಿಯೂ ಬೆಳೆದು ನಿಂತಿದ್ರು. ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕರಾಗಿದ್ದ ಸಂತೋಷ್ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ವಲಸೆ ಶಾಸಕರನ್ನು ಮುಂಬೈ ರೆಸಾರ್ಟ್ ಗೆ ಕಳುಹಿಸುವಲ್ಲಿಯೂ ಸಂತೋಷ್ ಯಶಸ್ವಿಯಾಗಿ ದ್ದರು. ಇದೇ ಕಾರಣದಿಂದಾಗಿಯೇ ಸಂತೋಷ್ ಅವರಿಗೆ ಯಡಿಯೂರಪ್ಪ ಉನ್ನತ ಹುದ್ದೆಯನ್ನು ನೀಡಿದ್ರು.

ಕಳೆದ ಕೆಲ ತಿಂಗಳಿನಿಂದಲೂ ಎನ್.ಆರ್.ಸಂತೋಷ್ ರಾಜಕೀಯ ಕಾರ್ಯದರ್ಶಿಯಾಗಿಯೂ ನೇಮಕವಾಗಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಎಂ ರಾಜಕೀಯ ಸಲಹೆಗಾರರಾಗಿದ್ದ ಮರಮಕಲ್ ರಾಜೀನಾಮೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಮಹದೇವ ಪ್ರಕಾಶ್ ಕುಮಾರ್ ಅದೇ ಹಾದಿಯನ್ನು ಹಿಡಿದ್ದರು. ಇಬ್ಬರ ರಾಜೀನಾಮೆಯ ಬೆನ್ನಲ್ಲೇ ಎನ್.ಆರ್. ಸಂತೋಷ್ ಅವರಿಗೂ ಕೂಡ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಒತ್ತಡ ಕೇಳಿಬಂದಿತ್ತು ಎನ್ನಲಾಗುತ್ತಿತ್ತು. ಆದ್ರೀಗ ಸಂತೋಷ್ ತನ್ನ ಮನೆಯಲ್ಲಿಯೇ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋದು ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಆಸ್ಪತ್ರೆಗೆ ಭೇಟಿ ಕೊಟ್ಟಿದ್ದ ಬಿ.ಎಸ್.ಯಡಿಯೂರಪ್ಪ ಅವರು ಯಾವ ಕಾರಣಕ್ಕೆ ಸಂತೋಷ್ ಇಂತಹ ನಿರ್ಧಾರ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಕುಟುಂಬಸ್ಥರ ಜೊತೆಗೆ ಮಾತನಾಡುತ್ತೇವೆ. ಏನಾದ್ರೂ ಇರುತ್ತಲ್ಲಾ ಅಂತಾ ಸಿಎಂ ನೀಡಿರುವ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಸಂತೋಷ್ ಪತ್ನಿ ಮಾಧ್ಯಮದವರೊಂದಿಗೆ ಮಾತನಾಡಿ, ಪತಿಗೆ ಕೌಟುಂಬಿಕವಾಗಿ ಯಾವುದೇ ಸಮಸ್ಯೆಯಿಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಿನ್ನೆ ಯಾವುದೋ ವಿಚಾರಕ್ಕೆ ಬೇಸರದಲ್ಲಿದ್ದರು. ಮನೆಗೆ ಬಂದು ಮೇಲೆ ಓದುತ್ತಾ ಇರುತ್ತೇನೆ ಅಂತಾ ಹೇಳಿದ್ರು, ಹೋಗಿ ನೋಡಿದಾಗ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದರು. ಅವರು ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ರಾಜಕೀಯ ಬದಲಾವಣೆಗಳಿಂದಲೇ ಇಂತಹ ನಿರ್ಧಾರಕ್ಕೆ ಬಂದಿರಬೇಕು ಅಂದಿದ್ದಾರೆ.

ಸಂತೋಷ್ ಯಾವುದೋ ಒತ್ತಡಕ್ಕೆ ಸಿಲುಕಿ ಇಂತಹ ನಿರ್ಧಾರಕ್ಕೆ ಬಂದಿರೋದು ಸ್ಪಷ್ಟವಾಗುತ್ತಿದೆ. ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸಂತೋಷ್ ಮೇಲೆ ಒತ್ತಡ ಹೇರಿದ್ದು ಯಾರು ಅನ್ನೋ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ಸಂತೋಷ್ ಆತ್ಮಹತ್ಯೆಯ ಬೆನ್ನಲ್ಲೇ ಪೊಲೀಸರು ಕೂಡ ತನಿಖೆಯನ್ನು ಶುರುವಿಟ್ಟುಕೊಂಡಿದ್ದಾರೆ. ಸದ್ಯ ಎನ್.ಆರ್.ಸಂತೋಷ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸಂತೋಷ್ ಗುಣಮುಖರಾದ ನಂತರವಷ್ಟೇ ಆತ್ಮಹತ್ಯೆ ಯತ್ನದ ಹಿಂದಿನ ಅಸಲಿ ಕಥೆ ಬಯಲಾಗೋದಕ್ಕೆ ಸಾಧ್ಯ.