ಥಿಯೇಟರ್ ಗಳು ಬಾಗಿಲು ಮುಚ್ಚಿದಾಗಿನಿಂದ ಜನರಿಗೆ ಸೋಷಿಯಲ್ ಮೀಡಿಯಾಗಳೇ ಮನೋರಂಜನೆಯ ಮಾಧ್ಯಮಗಳಾಗಿವೆ. ಇಂಥ ಸೋಷಿಯಲ್ ಮೀಡಿಯಾದಲ್ಲಿ ಇದೀಗ ರಾಧಿಕಾ ಕುಮಾರಸ್ವಾಮಿಯವರ ಲೇಟೆಸ್ಟ್ ವಿಡಿಯೋಗಳು ಸದ್ದು ಮಾಡಲಾರಂಭಿಸಿದೆ. ಏನ್ ವಿಡಿಯೋ ಅಂತ ಹುಬ್ಬೇರಿಸ್ತಾ ಇದ್ದೀರಾ. ಮತ್ತೇನಲ್ಲ. ರಾಧಿಕಾ ಕುಮಾರಸ್ವಾಮಿಯವರ ಹೊಸ ಚಿತ್ರ ಕಾಂಟ್ರಾಕ್ಟ್ ನ ಮೇಕಿಂಗ್ ವಿಡಿಯೋಗಳು.

ಹೌದು, ಕಾಂಟ್ರಾಕ್ಟ್ ರಾಧಿಕಾ ಕುಮಾರಸ್ವಾಮಿಯವರು ನಾಯಕಿಯಾಗಿ ನಟಿಸುತ್ತಿರುವ ಹೊಸ ಚಿತ್ರ. ಅರ್ಜುನ್ ಸರ್ಜಾ ಹಾಗೂ ತೆಲುಗಿನ ಜೆ.ಡಿ.ಚಕ್ರವರ್ತಿ ನಾಯಕರಾಗಿರುವ ಈ ಚಿತ್ರದ ಮೇಕಿಂಗ್ ವಿಡಿಯೋಗಳನ್ನು ರಾಧಿಕಾ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ವಿಶೇಷವಾಗಿ ನೃತ್ಯದ ವಿಡಿಯೋಗಳನ್ನು ರಾಧಿಕಾ ವೀಕ್ಷಕರಿಗೆ ನೀಡು ತ್ತಿದ್ದು, ಹೇಗಿದೆ ನನ್ನ ನೃತ್ಯ ಎಂದು ಕೂಡ ಪ್ರಶ್ನೆ ಮಾಡ್ತಿದ್ದಾರೆ.

ವಿಡಿಯೋಗಳ ಜೊತೆ ಅಭಿಮಾನಿಗಳಿಗೆ ಸಂದೇಶವನ್ನು ನೀಡಿರುವ ರಾಧಿಕಾ ಕುಮಾರಸ್ವಾಮಿ, ಇವೆಲ್ಲ ನನ್ನ ಹೊಸ ಚಿತ್ರದ ಮೇಕಿಂಗ್ ವಿಡಿಯೋಗಳು ಹೇಗಿದೆ ನೋಡಿ ಹೇಳಿ ಎಂದು ಅಭಿಮಾನಿಗಳಿಗೆ ಆಫರ್ ನೀಡ್ತಿದ್ದಾರೆ. ಈ ವಿಡಿಯೋಗಳನ್ನು ಸಾವಿರಾರು ಜನರು ಶೇರ್ ಮಾಡಿಕೊಂಡಿದ್ದು, ಲಕ್ಷಾಂತರ ಜನರು ಲೈಕ್ ಮಾಡ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮತ್ತೆ ಸಕ್ರಿಯವಾಗಿ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ವಿಭಿನ್ನ ಕಥಾಹಂದರ ಹಾಗೂ ವಿನೂತನ ಮೇಕಪ್ ಗೆ ಅವಕಾಶವಿರುವ ಭೈರಾದೇವಿ ಸಿನಿಮಾದಲ್ಲಿ ನಟಿಸಿದ್ದು, ಇದು ಇನ್ನು ತೆರೆಗೆ ಬರಬೇಕಿದೆ. ಇದಲ್ಲದೇ ರಾಧಿಕಾ ನಟನೆಯ ರಾಜೇಂದ್ರ ಪೊನ್ನಪ್ಪ ಕೂಡ ಬಿಡುಗಡೆಗೆ ಬಾಕಿ ಇದೆ.

ಕಾಂಟ್ರಾಕ್ಟ್ ಚಿತ್ರ ಎರಡು ಚಿತ್ರಗಳಿಗಿಂತ ಮೊದಲೇ ಸೆಟ್ಟೇರಿದ್ದು, ಇನ್ನೇನು ಚಿತ್ರೀಕರಣ ಅಂತಿಮ ಹಂತದಲ್ಲಿದೆ. ರಾಧಿಕಾ ಕುಮಾರಸ್ವಾಮಿ ಅತ್ಯುತ್ತಮ ನೃತ್ಯಗಾತಿ ಅನ್ನೋದನ್ನು ಅವರ ಹಲವು ಸಿನಿಮಾಗಳಲ್ಲಿ ಅವರು ಸಾಬೀತುಪಡಿಸಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳನ್ನು ಇದನ್ನು ಮತ್ತೆ ಸಾಬೀತುಪಡಿಸಿದೆ.